ಕುಮಟಾ: ತಾಲೂಕಿನ ಬರ್ಗಿಯ ಬೆಟ್ಕುಳಿಯಲ್ಲಿ ನೂತನವಾಗಿ ನಿರ್ಮಾಣವಾದ ಹರಿಕಂತ್ರ ಸಭಾಭವನವನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಸಂಬಂಧಗಳಿಗೆ ಬೆಲೆ ನೀಡಿ, ಹಿರಿಯರನ್ನು ಗೌರವಿಸಿ ಹಿಂದುಳಿದ ಪ್ರತಿಯೊಂದು ಜಾತಿ-ಜನಾಂಗದ ಜನರು ಒಗ್ಗಟ್ಟಾಗಿ ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲ ಧ್ವನಿಯಾಗಬೇಕು ಎಂದರು.
ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಪ್ರದೀಪ ನಾಯಕರು ಹೇಳಿದಹಾಗೆ ಹಿಂದುಳಿದ ವರ್ಗದವರಿಗೆ ಜೊತೆಯಾಗಬೇಕು. ಮೀನುಗಾರರು ಕರಾವಳಿಯ ಶ್ರಮ ಮತ್ತು ಸಂಸ್ಕೃತಿಯ ಪ್ರತಿಬಿಂಬ. ನಿಮ್ಮ ಕಷ್ಟ, ಸುಖದಲ್ಲಿ ನಾವಿದ್ದೇವೆ ಎಂದು ಮೀನುಗಾರರಿಗೆ ಧೈರ್ಯ ತುಂಬಿದರು.
ಅಧ್ಯಕ್ಷತೆ ವಹಿಸಿದ್ದ ಹರಿಕಂತ್ರ ಸಮಾಜ ಅಭಿವೃದ್ಧಿ ಒಕ್ಕೂಟದ ತಾಲೂಕಾಧ್ಯಕ್ಷ ಜಗದೀಶ ಹರಿಕಂತ್ರ ಮಾತನಾಡಿ, ಮೀನುಗಾರರಿಗೆ ಯಾವುದೇ ಸಭೆ ಸಮಾರಂಭಗಳನ್ನು ನಡೆಸಲು ಇಲ್ಲಿ ಸ್ಥಳಾವಕಾಶವಿರಲಿಲ್ಲ. ಆಗ ನಮ್ಮ ಜನಾಂಗದ ಹಿರಿಯರ ಪರಿಕಲ್ಪನೆಯಲ್ಲಿ ಈ ಸಭಾ ಭವನ ಎಲ್ಲರ ಪರಿಶ್ರಮ ಅಡಿಗಿದೆ. ಪ್ರದೀಪ ನಾಯಕ ಸಹಕಾರ ನಾವು ಸ್ಮರಿಸಲೇಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಟ್ಕುಳಿಯ ಹರಿಕಂತ್ರ ಸಮಾಜದ ಯಜಮಾನ ಲಕ್ಷ್ಮಣ ಹರಿಕಂತ್ರ, ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದು ಕವರಿ, ಗೋಕರ್ಣ ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಉಪಾಧ್ಯಕ್ಷ ರಾಮು ಕೆಂಚನ್, ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ, ಉಪಾಧ್ಯಕ್ಷೆ ಬೇಬಿ ಹರಿಕಂತ್ರ, ಉದ್ಯಮಿ ಆನಂದು ಹರಿಕಂತ್ರ, ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.