ಹೊನ್ನಾವರ: ಚಂದ್ರಕಾಂತ ಕೊಚರೇಕರ ನೇತ್ರತ್ವದ ಅರಣ್ಯಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗವು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ಮಾಡಿತು.ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ಪಶ್ಚಿಮ ಘಟ್ಟ ಪ್ರದೇಶದ ಜನವಸತಿ, ಕೃಷಿ ಮತ್ತು ತೋಟಗಾರಿಕೆ ಪ್ರಧಾನವಾಗಿರುವ ಸ್ಥಳವು ಸೇರಿದಂತೆ ಜಿಲ್ಲೆಯ 9 ತಾಲೂಕುಗಳ 204 ಗ್ರಾಮಗಳನ್ನು ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಘೋಷಣೆ ಮಾಡಿ ಈ ಭಾಗದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿ ಇತ್ತೀಚೆಗೆ ಕರಡು ಅಧಿಸೂಚನೆಯನ್ನು ಹೊರಡಿಸಿರುವುದು ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜನ ಜೀವನಕ್ಕೆ ಮಾರಕವಾಗಿದೆ.
ಅದರಲ್ಲೂ ವಿಶೇಷವಾಗಿ ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿರುವ ಜಿಲ್ಲೆಯ 68000 ಕ್ಕೂ ಹೆಚ್ಚು ಕುಟುಂಬಗಳ ಬದುಕು ಬೀದಿಗೆ ಬರುವ ಅಪಾಯವಿರುವುದರಿಂದ ಕೇಂದ್ರದ ಕರಡು ಅಧಿ ಸೂಚನೆಯನ್ನು ಕೂಡಲೇ ಹಿಂಪಡೆದು ಜಿಲ್ಲೆಯ ಜನರ ಹಿತರಕ್ಷಣಿ ಮಾಡಲು ರಾಜ್ಯಸರಕಾರ ಮಧ್ಯಪ್ರವೇಶ ಮಾಡಬೇಕು ಮತ್ತು ಅರಣ್ಯ ಹಕ್ಕು ಮುನ್ನಡೆ ಕಾಯಿದೆಯ ಅನುಷ್ಠಾನದಲ್ಲಿನ ಹಾಗೂ ಮೂರು ತಲೆಮಾರುಗಳ ಪೂರ್ವದ ದಾಖಲೆಗಳಿಗಾಗಿ ಒತ್ತಾಯಿಸುತ್ತಿರುವ ಶರತ್ತಿನ ಗೊಂದಲವನ್ನು ನಿವಾರಿಸಬೇಕು. ಈ ವಿಚಾರದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ್ ಪೂಜಾರಿಯವರು ಮುಖ್ಯಮಂತ್ರಿಗಳ ಗಮನ ಸೆಳೆದು ಕೇಂದ್ರಕ್ಕೆ ನಿಯೋಗ ಒಯ್ಯುವ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಹೋರಾಟ ಸಮಿತಿಯ ನಿಯೋಗವು ಒತ್ತಾಯಿಸಿದೆ.
ನಿಯೋಗದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ , ಉಪಾಧ್ಯಕ್ಷರಾದ ಯೋಗೇಶರಾಯ ಆನಂತ ನಾಯ್ಕ ಹೆಗ್ಗಾರ, ಗಣೇಶ ಜಿ. ನಾಯ್ಕ, ಬೆಲಗದ್ದೆ ವಿನೋದ ನಾಯ್ಕ ವಿನಾಯಕ ನಾಯ್ಕ ಮೂಡಕಣಿ ನಗರಬಸ್ತಿಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ನಾಯ್ಕ ಮುಂತಾದ ಪ್ರಮುಖರು. ನಿಯೋಗದಲ್ಲಿದ್ದರು. ಈ ಸಂದರ್ಭದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ ಮತ್ತು ಕುಮಟ ಶಾಸಕ ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಸಚಿವ ಪೂಜಾರಿ ಭರವಸೆ: ಜನವಸತಿ ಪ್ರದೇಶಗಳನ್ನು ಸಹ ಪರಿಸರ ಸೂಕ್ಷ್ಮವಲಯವನ್ನಾಗಿ ಘೋಷಣೆ ಮಾಡಿ ಕೇಂದ್ರ ಸರಕಾರ ಇತ್ತೀಚೆಗೆ ಹೊರಡಿಸಿರುವ ಕರಡು ಅಧಿಸೂಚನೆಯಿಂದ ರಾಜ್ಯದ ಅಭಿವೃದ್ಧಿ ಮತ್ತು ಜನ ಜೀವನದ ಮೇಲೆ ಬೀರಬಹದಾದ ದುಷ್ಪರಿಣಾಗಳ ಬಗ್ಗೆ ತನಗೆ ಅರಿವಿದೆ. ಅರಣ್ಯ ಹಕ್ಕು ಮಾನ್ಯತೆಯ ಅರ್ಜಿಗಳ ವಿಚಾರಣೆ ಮತ್ತು ಮಂಜೂರಿ ಪ್ರಕ್ರಿಯೆಯಲ್ಲಿ ಉಪವಿಭಾಗ ಸಮಿತಿಯು ವಿಚಾರಣೆಗೆ ಹಾಜರಾಗುವ ತಿಳುವಳಿಕೆ ಪತ್ರದಲ್ಲಿ ಅರ್ಜಿದಾರರು ಮೂರು ತಲೆಮಾರಿನ ದಾಖಲೆಗಳನ್ನು ಪೂರೈಸುವಂತೆ ಶರತ್ತುಗಳನ್ನು ವಿಧಿಸಲಾಗುತ್ತಿರುವ ಗೊಂದಲವನ್ನು ನಿವಾರಿಸಿ ಸೂಕ್ತ ಆದೇಶ ಮಾಡಲಾಗುವದು. ಈ ಬಗ್ಗೆ ಇದೇ ಸೋಮವಾರ ಪಶ್ಚಿಮ ಘಟ್ಟ ಪ್ರದೇಶದ ಶಾಸಕರ ತುರ್ತು ಸಭೆ ಕರೆದು ಅವರೊಂದಿಗೆ ಚರ್ಚಿಸಿ ಅರ್ಹ ಅರಣ್ಯವಾಸಿಗಳಿಗೆ ಅವರು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುಪತ್ರ ನೀಡಲು ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯನ್ನು ಜನಪರವಾಗಿ ಅನುಷ್ಠಾನಿಸಲು ಮತ್ತು ವನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ ಇತ್ತೀಚೆಗೆ ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರದ ಕ್ರಮದ ಸಾಧಕ ಬಾಧಕಗಳನ್ನು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಭೇಟಿ ಮಾಡಿದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.