Slide
Slide
Slide
previous arrow
next arrow

ಹಸಿರಿನ ಗ್ರಾಮ ಕ್ಯಾಸಲ್ ರಾಕ್ : ವೈಶಿಷ್ಟ್ಯತೆ ಇಲ್ಲಿದೆ ನೋಡಿ!!

300x250 AD

ಜೋಯಿಡಾ: ಕರ್ನಾಟಕದಲ್ಲಿ ಹಬ್ಬಿದ ಪಶ್ಚಿಮ ಘಟ್ಟಗಳ ನಡುವಿನ ದಟ್ಟ ಹಸಿರಿನ ಗ್ರಾಮವೇ ಈ ಕ್ಯಾಸಲ್ ರಾಕ್. ಸಮುದ್ರ ಮಟ್ಟದಿಂದ 2040 ಅಡಿ ಎತ್ತರದ ಈ ಗ್ರಾಮವು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿದ್ದು ಇತಿಹಾಸದಲ್ಲೂ ಉಲ್ಲೇಖಿತವಾದ ವೈಶಿಷ್ಟಪೂರ್ಣ ಗ್ರಾಮವಾಗಿದೆ.

ಈ ಹಿಂದೆ ಸೂಪಾ ಎಂದು ಕರೆಯಿಸಿಕೊಳ್ಳುತ್ತಿದ್ದ ಇಂದಿನ ಜೋಯಿಡಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮವು ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ಕ್ಯಾಸಲ್ ರಾಕ್‌ನಲ್ಲಿರುವ ಸಸ್ಯವರ್ಗವು ಹೆಚ್ಚು ತೇವಾಂಶವುಳ್ಳ ಕಾಡುಗಳಾಗಿದ್ದು, ಉಷ್ಣವಲಯದ ಎಲೆ ಉದುರುವ ಕಾಡುಗಳ ಸ್ವರೂಪವನ್ನು ಹೊಂದಿದೆ. ಕ್ಯಾಸಲ್ ರಾಕ್ ಪ್ರದೇಶದಲ್ಲಿ ಮ್ಯಾಂಗನೀಸ್ ಲಭ್ಯತೆಯು ಹೇರಳವಾಗಿದೆ. ಇಡೀ ಕ್ಯಾಸಲ್ ರಾಕ್ ಸ್ಥಳವು ಮೊದಲು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು. ಆದರೆ ಈಗ ಈ ಪ್ರದೇಶದಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಹೇರಳವಾದ ಅರಣ್ಯ ಸಂಪತ್ತಿನಿಂದ ಕೂಡಿದ ಈ ಗ್ರಾಮವು ದಾಂಡೇಲಿ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ.ದಾಂಡೇಲಿ ಅಣಶಿ ಹುಲಿ ರಕ್ಷಿತಾರಣ್ಯದಲ್ಲಿ ಇರುವ ಅರಣ್ಯ ಪ್ರದೇಶದ ನಡುವೆ ಈ ಗ್ರಾಮವು ಕಂಡುಬರುತ್ತದೆ. ವಿಶೇಷವೆಂದರೆ ಇಲ್ಲಿರುವ ಕಾಡುಗಳು ನಿತ್ಯ ಹರಿದ್ವರ್ಣ ಕಾಡುಗಳಾಗಿರದೇ ಶರದ್ ಕಾಲದಲ್ಲಿ ಎಲೆ ಉದುರಿಸುವ ಕಾಡುಗಳಾಗಿದ್ದು ಸಸ್ಯಶಾಸ್ತ್ರದಲ್ಲಿ ಉಷ್ಣವಲಯದ ಪತನ ಶೀಲ ಕಾಡುಗಳು ಎಂದು ಕರೆಯಲ್ಪಡುವ ವರ್ಗಕ್ಕೆ ಸೇರುತ್ತವೆ.

ಈ ಪ್ರದೇಶವು ಭಾರತೀಯ ಇತಿಹಾಸದಲ್ಲೂ ಉಲ್ಲೇಖಿಸಲ್ಪಟ್ಟ ಸ್ಥಳವಾಗಿದೆ.ಭಾರತದ ಸ್ವಾತಂತ್ರ್ಯಾನಂತರವೂ ಅಂದಿನ ಗೋವೆಯು ಬಹುಕಾಲದವರೆಗೆ ಪೋರ್ಚುಗೀಸರ ವಶದಲ್ಲಿತ್ತು. ಆ ಸಂದರ್ಭದಲ್ಲಿ ಗೋವಾ ಹಾಗೂ ಭಾರತದ ನಡುವಿನ ಗಡಿ ರೇಖೆಯೆಂದು ಉತ್ತರ ಕನ್ನಡದ ಕ್ಯಾಸಲ್ ರಾಕ್ ಪ್ರದೇಶವನ್ನು ಪರಿಗಣಿಸಲಾಗಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.1990ರ ದಶಕದಲ್ಲಿ ಕೊಂಕಣ ರೈಲ್ವೆ ಸೇವೆಗಳು ಗೋವಾಕ್ಕೆ ವಿಸ್ತರಿಸಿದಾಗ ಗೋವಾವನ್ನು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸಲು ಕ್ಯಾಸಲ್ ರಾಕ್ ರೈಲು ನಿಲ್ದಾಣವನ್ನೇ ಬಳಸಲಾಯಿತು. ಕ್ಯಾಸಲ್ ರಾಕ್ ರೈಲ್ವೇ ನಿಲ್ದಾಣದಲ್ಲಿ ಇಂದಿಗೂ ಗೇಜ್ ಟ್ರ್ಯಾಕ್‌ಗಳಿರುವುದು ಇತಿಹಾಸವನ್ನು ಪುಷ್ಠಿಕರಿಸುತ್ತದೆ. ಬ್ರಿಟೀಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಎಲ್ಲ ಬಗೆಯ ಕಸ್ಟಮ್ ತಪಾಸಣಾ ಸ್ಥಳವಾಗಿತ್ತು. ಗೋವಾ ಮತ್ತು ಕರ್ನಾಟಕದ ನಡುವಿನ ಬೆಟ್ಟ ಭಾಗವಾದ ಬಂಗಾಜಾ ಘಾಟ್‌ಗಳ ಪ್ರಾರಂಭವನ್ನು ಕ್ಯಾಸಲ್ರಾಕ್ ರೈಲ್ವೇ ನಿಲ್ದಾಣವು ಸೂಚಿಸುತ್ತದೆ. ಕ್ಯಾಸಲ್ ರಾಕ್ ರೈಲ್ವೆಯು ಹಳೆಯ ಕೋಟೆಯಂತಹ ಬೆರಗುಗೊಳಿಸುವ ಸುರಂಗಮಾರ್ಗಕ್ಕೆ ಹೆಸರುವಾಸಿಯಾಗಿದ್ದು ಈ ಸುರಂಗಗಳು ಪ್ರಯಾಣದ ಅನುಭವವನ್ನು ವಿಶೇಷ ಎನಿಸುವಂತೆ ಮಾಡುತ್ತದೆ.

300x250 AD

ಕ್ಯಾಸಲ್ ರಾಕ್ ಮಾರ್ಗವಾಗಿ ಸುಪ್ರಸಿದ್ಧ ಧೂದ್ ಸಾಗರ್ ಜಲಪಾತವನ್ನು ತಲುಪಬಹುದಾಗಿದೆ.ಭಾರತದ ಅತಿ ಎತ್ತರದ ಜಲಪಾತಗಳಲ್ಲೊಂದಾದ ಧೂದ್ ಸಾಗರದ ಅತೀ ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಅದು ಕ್ಯಾಸಲ್ ರಾಕ್ ರೈಲ್ವೇ ನಿಲ್ದಾಣ, ಸಾಹಸಪ್ರಿಯರಿಗೆ ಕ್ಯಾಸಲ್ ರಾಕ್‌ನಿಂದ ಧೂದ್ ಸಾಗರದವರೆಗಿನ ಹನ್ನೊಂದು ಕಿಲೋಮೀಟರ್ ಉದ್ದದ ಪುಟ್ಟ ಪುಟ್ಟ ಜಲಪಾತಗಳು, ಸುಂದರ ಸುರಂಗ ಮಾರ್ಗದ ನಡುವಿನ ಚಾರಣವು ಅವಿಸ್ಮರಣೀಯ ಅನುಭವ ನೀಡುತ್ತದೆ.

Share This
300x250 AD
300x250 AD
300x250 AD
Back to top