ಶಿರಸಿ; ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಬಳಸುವುದನ್ನು ಕಡಿಮೆ ಮಾಡಿ ಹೆಚ್ಚೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಓದಿನ ಕಡೆಗೆ ಹೆಚ್ಚಿನ ಗಮನವನ್ನು ನೀಡಿದರೆ ಮುಂದಿನ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರ ಸಮಾಲೋಚಕ ಶಿವಶಂಕರ್ ಎನ್.ಕೆ.ಹೇಳಿದರು.
ಅವರು ಹೊಸೂರು ಶ್ರೀ ಬಂಕೇಶ್ವರ ಪ್ರೌಢಶಾಲೆಯಲ್ಲಿ 2022-23 ನೇ ಸಾಲಿನ 8ನೇ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಉಳಿತಾಯ ಮತ್ತು ಶೈಕ್ಷಣಿಕ ಸಾಲ ಸೌಲಭ್ಯಗಳು ಉದ್ಯೋಗ ತರಬೇತಿಗಳು ಸೇರಿದಂತೆ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಧ್ಯಾಪಕ ಲೋಕೇಶ ನಾಯ್ಕ ಮಾತನಾಡಿ, ಮಕ್ಕಳು ಶಾಲೆಯ ನಿಯಮದಂತೆ ನಡೆದುಕೊಳ್ಳಬೇಕು. ಆದರ್ಶವನ್ನು ಇತರರು ಪಾಲಿಸುವಂತಾಗಬೇಕು. ಜೊತೆಗೆ ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ಶಾಲೆಯ ಹಿರಿಮೆ ಹೆಚ್ಚಿಸಬೇಕು ಎಂದರು. ಶಿಕ್ಷಕ.ಟಿ.ಸಿ ನಾಯ್ಕ ಸ್ವಾಗತಿಸಿದರು.ಎಂ.ಬಿ.ನಾಯ್ಕ ನಿರೂಪಿಸಿದರು.ವಿ. ಟಿ ನಾಯ್ಕ ವಂದಿಸಿದರು. ಶಿಕ್ಷಕ ದೇವೇಂದ್ರ ನಾಯ್ಕ, ರವೀಂದ್ರ ನಾಯ್ಕ, ಕಮಲಾಕ್ಷಿ ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.