ಸಿದ್ದಾಪುರ: ನೀವು ಓದಿದ, ನಿಮಗೆ ಜೀವನ ಕೊಟ್ಟ ನಿಮ್ಮ ಹಳ್ಳಿಯ ಶಾಲೆಗಳನ್ನು ದತ್ತು ತೆಗೆದುಕೊಂಡು ಅದರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ. ಇದರಿಂದ ನಮ್ಮ ಹಳ್ಳಿಗಳು ಉದ್ಧಾರ ಆಗುವವು. ಇದರ ಮೂಲಕ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗುವುದು ಎಂದು ಟೀಂ ಪರಿವರ್ತನೆಯ ಸಂಸ್ಥಾಪಕ ಹಿತೇಂದ್ರ ನಾಯ್ಕ ಹೇಳಿದರು.
ಅವರು ದತ್ತು ತೆಗೆದುಕೊಂಡ ತಾಲೂಕಿನ ಹಕ್ಕಲಾಮನೆ- ಕಿಲಾರ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಳೆಗಾಲದ ನಿಮಿತ್ತ ರೈನ್ ಕೋಟ್ ಮತ್ತು ಪಠ್ಯ- ಪುಸ್ತಕ ವಿತರಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಮಾತನಾಡಿ, ಹಿತೇಂದ್ರ ನಾಯ್ಕ ಅವರಿಗೆ ಹಳ್ಳಿಗಳ, ಮಕ್ಕಳ ಹಾಗೂ ವಿದ್ಯೆಯ ಮೇಲೆ ಇರುವ ಕಾಳಜಿ ಅಪಾರ, ಇದನ್ನೇ ಎಲ್ಲರೂ ಬೆಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಸೋಮಶೇಖರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ಥಳೀಯರು ಉಪಸ್ಥಿತರಿದ್ದರು.