ಶಿರಸಿ: ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಜು.13ರಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಭೇಟಿ ನೀಡಿ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಚಟುವಟಿಕೆಗಳನ್ನು ವೀಕ್ಷಿಸಿದರು.
ನಂತರ ಸಂಸ್ಥೆಯ ವಜ್ರ ಮಹೋತ್ಸವದ ಮನವಿ ಪತ್ರವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. “64 ವರ್ಷಗಳ ಸುದೀರ್ಘ ಕಾಲ ಸೇವಾ ಭಾವನೆಯಿಂದ, ಗ್ರಾಮಾಂತರ ಭಾಗದಲ್ಲಿ, ಸರಕಾರದ ಸಹಾಯವಿಲ್ಲದೇ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಹಲವು ಜನರ ತ್ಯಾಗ ಹಾಗೂ ಸೇವೆಯ ಫಲದಿಂದಾಗಿ ಮಕ್ಕಳಿಗೆ ಇಲ್ಲಿ ಒಳ್ಳೆಯ ಶಿಕ್ಷಣ ದೊರಕಲು ಸಾಧ್ಯವಾಗಿದೆ. ಇಂತಹ ಒಳ್ಳೆಯ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಚೆನ್ನಾಗಿ ಓದಿ ಸ್ವಾವಲಂಬಿಗಳಾಗಬೇಕು ಹಾಗೂ ರಾಷ್ಟ್ರಪ್ರೇಮಿಗಳಾಗಬೇಕು. ಅದಲ್ಲದೇ ನಮಗೆ ಹಿರಿಯರ ತ್ಯಾಗ ಹಾಗೂ ಸೇವೆಯಿಂದ ದೊರಕಿರುವ ಸೌಲಭ್ಯದ ಸಾಮಾಜಿಕ ಋಣವನ್ನು ತೀರಿಸುವ ಜವಾಬ್ದಾರಿ ಮಕ್ಕಳ ಮೇಲೆ ಇದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಜ್ರ ಮಹೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಹಾಗೂ ಕರ್ನಾಟಕ ಸರಕಾರದ ಜೀವ ವೈವಿಧ್ಯ ಮಂಡಳಿಯ ಭೂತಪೂರ್ವ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ, ಸಂಸ್ಥೆಯ ಕಾರ್ಯದರ್ಶಿ ಎಂ.ವಿ.ಹೆಗಡೆ ಹುಳಗೋಳ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಬಸವರಾಜ, ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಆಡಳಿತ ಮಂಡಳಿಯ ಸದಸ್ಯರು, ಉಭಯ ಸಂಸ್ಥೆಗಳ ಶಿಕ್ಷಕ ವೃಂದ, ಸಾರ್ವಜನಿಕರು ಹಾಜರಿದ್ದರು. ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಅತಿಥಿಗಳನ್ನು ಸ್ವಾಗತಿಸಿದರು.