ಶಿರಸಿ: ನಗರದಿಂದ ಚಂದ್ರಗುತ್ತಿ ಮಾರ್ಗಕ್ಕೆ ಒಂದೇ ಒಂದು ಬಸ್ ಬಿಡಲಾಗುತ್ತಿದ್ದು, ಇದು ಭರ್ತಿಯಾಗಿ ಬರುತ್ತಿರುವುದರಿಂದ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಬುಧವಾರ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸಿದರು. ಬೆಳಿಗ್ಗೆ ಮತ್ತೊಂದು ಹೆಚ್ಚುವರಿ ಬಸ್ ಬಿಡುವಂತೆ ಆಗ್ರಹಿಸಿ ಪಟ್ಟು ಹಿಡಿದರು.
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಗಡಿಭಾಗವಾದ ಚಂದ್ರಗುತ್ತಿ ತೆಲಗುಂದ್ಲಿ ಹರೀಶಿ ಕಡೆಗಳಿಂದ ನಿತ್ಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ನಗರದ ವಿವಿಧ ಶಾಲಾ- ಕಾಲೇಜುಗಳಿಗೆ ಬರುತ್ತಾರೆ. ಆದರೆ ಚಂದ್ರಗುತ್ತಿಯಿಂದ ಶಿರಸಿ ಮಾರ್ಗಕ್ಕೆ ಒಂದೇ ಒಂದು ಬಸ್ಸಿನ ವ್ಯವಸ್ಥೆ ಇದ್ದು, ಇಲ್ಲಿ ಪ್ರಯಾಣಿಕರು ಸೇರಿದಂತೆ ವಿದ್ಯಾರ್ಥಿಗಳು ಸೇರಿ ದಿನನಿತ್ಯ ಬೆಳಿಗ್ಗೆ ಎರಡು ನೂರಕ್ಕೂ ಅಧಿಕ ಜನ ಪ್ರಯಾಣಿಸುತ್ತಾರೆ. ಚಂದ್ರಗುತ್ತಿ ಆರಂಭದಿಂದಲೇ ಬಸ್ಸು ತುಂಬಿ ಬರುವುದರಿಂದ ಜಾಗವಿಲ್ಲದೆ ಕೆಲ ವಿದ್ಯಾರ್ಥಿಗಳು ಬಾಗಿಲ ಬಳಿ ಜೋತು ನಿಂತು ಸಾಗಿದರೆ, ಇನ್ನೂ ಕೆಲ ವಿದ್ಯಾರ್ಥಿಗಳು ಮನೆಗೆ ವಾಪಸ್ಸಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ.
ಪ್ರತಿದಿನದ ಸಮಸ್ಯೆಯಿಂದ ರೋಸಿ ಹೋಗಿದ್ದ ಇಲ್ಲಿನ ವಿಧ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಸಾರಿಗೆ ಅಧಿಕಾರಿ ಪೀಟರ್ ಡಯಾಸ್, ಬನವಾಸಿ ಪೋಲಿಸ್ ಠಾಣೆಯ 112 ವಾಹನದ ಎಎಸ್‌ಐ ರಾಜೇಶ ನಾಯ್ಕ, ಭಾಸ್ಕರ ನಾಯ್ಕ ಆಗಮಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ಮುಂದಿನ ಸೋಮವಾರದಿಂದ ಶಿರಸಿ- ಚಂದ್ರಗುತ್ತಿ ಮಾರ್ಗಕ್ಕೆ ಹೆಚ್ಚುವರಿ ಬಸ್ ಬಿಡುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸೋಮವಾರದಿಂದ ಹೆಚ್ಚುವರಿ ಬಸ್ ಬಿಡದಿದ್ದರೆ ರಸ್ತೆ ಮೇಲೆ ಮಲಗಿ ಪ್ರತಿಭಟನೆ ಮಾಡುವುದಾಗಿ ವಿದ್ಯಾರ್ಥಿ ಮುಖಂಡರಾದ ಆದರ್ಶ, ಪುನೀತ, ಮಧು, ದರ್ಶನ್, ಸಂಜಯ, ಅಮಿತ ತಿಳಿಸಿದ್ದಾರೆ.