ಹೊನ್ನಾವರ: 83 ವರ್ಷದ ವಸಂತ ಕಾಮತ್ ಅವರ ತೀರ್ಥಯಾತ್ರೆ ಸುಖಮಯವಾಗಿರಲಿ ಎಂದು ಶಾಲು ಹೊದಿಸಿ ಸನ್ಮಾನಿ ಗೌರವಿಸಿ ಬೀಳ್ಕೊಟ್ಟರು.
80 ಜನರ ತಂಡದೊಂದಿಗೆ ಮಂಗಳವಾರ ಕಾಶಿ, ಪ್ರಯಾಗ, ತ್ರಿವೇಣಿ ಸಂಗಮ, ಅಯೋಧ್ಯಾ ಯಾತ್ರೆಗೆ ಹೊರಟಿರುವ ವಸಂತ ಕಾಮತ್ ಅವರು ಈ ಬಾರಿ 24ನೇ ತಂಡದ ಯಾತ್ರೆಗೆ ಹೊರಟಿದ್ದಾರೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ತೀರ್ಥಕ್ಷೇತ್ರ ಯಾತ್ರೆ ಮಾಡಿಸುವ ಹವ್ಯಾಸ ಹೊಂದಿರುವ ಇವರು 6-7 ಸಾವಿರ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ತೀರ್ಥಕ್ಷೇತ್ರಗಳನ್ನು ದರ್ಶನ ಮಾಡಿಸಿ ಕರೆ ತರುತ್ತಿದ್ದಾರೆ. ಕರ್ಕಿಯಿಂದ ರೈಲಿನಲ್ಲಿ ಹೋಗಿ ಅಲ್ಲಿಂದ ವಿಶೇಷ ಬಸ್ಸಿನಲ್ಲಿ ಹೋಗಿ ಬರುವ ವೆಚ್ಚದ ಹೊರತಾಗಿ ಊಟವಸತಿಗೆ ದೇವಾಲಯ, ಮಠ-ಮಂದಿರಗಳ ಆಶ್ರಯ ಪಡೆದು ಕೈಗೆಟಕುವ ಸೇವೆಗಳನ್ನು ಸಲ್ಲಿಸಿ 10 ಸಾವಿರ ರೂಪಾಯಿ ಒಳಗೆ 10 ದಿನಗಳ ಯಾತ್ರೆಯನ್ನು ಮುಗಿಸಬಹುದು. ಪೌರಾಣಿಕ ಪಾತ್ರಗಳ ಹವ್ಯಾಸಿ, ಛದ್ಮವೇಷಧಾರಿಯಾಗಿ ಪರಿಚಿತರಾಗಿರುವ ಇವರು, ಇದಲ್ಲದೆ ದೇಶದ ಎಲ್ಲ ಪುಣ್ಯತೀರ್ಥ ಕ್ಷೇತ್ರಗಳ ಯಾತ್ರೆಯನ್ನು ಕಡಿಮೆ ವೆಚ್ಚದಲ್ಲಿ ಮಾಡಿಸುತ್ತ ಬಂದಿದ್ದಾರೆ.
ನಗರದ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮ ಸೇವೆಸಲ್ಲಿಸುವ ಇವರು ಉದ್ಯೋಗಿಯಾಗಿ ಮುಂಬೈಯಲ್ಲಿ ನೆಲೆಸಿರುವುದರಿಂದ ನಾಲ್ಕು ಭಾಷೆಯನ್ನು ಮಾತನಾಡುವ ಕಲೆ ಪರಿಣಿತಿ ಹೊಂದಿದ್ದಾರೆ. ಇವರ ಸನ್ಮಾನದ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ, ಗ್ರಾ.ಪಂ. ಅಧ್ಯಕ್ಷ ಜಿ.ಜಿ.ಶಂಕರ್, ಅಜಿತ್ ನಾಯ್ಕ, ಮಾಜಿ ಪ.ಪಂ. ಅಧ್ಯಕ್ಷ ಸದಾನಂದ ಭಟ್, ಉದ್ಯಮಿ ಜೆ.ಟಿ.ಪೈ, ಲಯನ್ಸ ಕ್ಲಬ್ ಕಾರ್ಯದರ್ಶಿ ರಾಜೇಶ ಸಾಲೆಹಿತ್ತಲ್, ದೀಪಕ ಶೇಟ್ ಮುಂತಾದವರಿದ್ದರು.