ಯಲ್ಲಾಪುರ:ಪಟ್ಟಣದ ಮಾದರಿ ಶಾಲೆಯ ಆಟದ ಮೈದಾನದ ಆವರಣದಲ್ಲಿ ಮಳೆಯಿಂದಾಗಿ ವ್ಯಾಪಕವಾಗಿ ನೀರು ತುಂಬಿನಿಂತು ಕಿರಿಕಿರಿ ಉಂಟು ಮಾಡಿತು.
ಇದನ್ನು ಗಮನಿಸಿದ ಸ್ಥಳೀಯ ಯುವಕರು ಶ್ರಮದಾನದ ಮೂಲಕ ಮಳೆ ನೀರು ಸರಾಗವಾಗಿ ಹೋಗುವಂತೆ, ಕಟ್ಟಿರುವ ಗಟಾರ ಬಿಡಿಸಿ ಕೊಟ್ಟರು. ಮಾದರಿ ಶಾಲೆಯ ಹಳೆಯ ಕಟ್ಟಡ ಸೋರುತ್ತಿದ್ದು, ನೀರು ಸೋರುವಲ್ಲಿ ಹೆಂಚು ಹಾಕಿ ಸರಿಪಡಿಸಿದರು. ಶಾಲೆಯ ಸಭಾಭವನದ ಸುತ್ತಲೂ ಶೆಡ್ ನಟ್ ಕಟ್ಟಿ ಮಳೆಯ ಹನಿ ಆವರಣದೊಳಗೆ ಸಿಡಿಯುವುದನ್ನು ತಪ್ಪಿಸಿದರು.
ಸ್ಥಳೀಯ ಯುವಕರಾದ ಸಂದೀಪ ವಡ್ಡರ್, ಸೋಮೇಶ್ವರ ನಾಯ್ಕ, ವೆಂಕಟೇಶ ಗೌಡ, ಶ್ರೀನಿವಾಸ ಪಾಟೀಲ್ ಇತರರು ಈ ಕಾರ್ಯದಲ್ಲಿ ಭಾಗಿಯಾದರು. ಎಲ್ಲ ಕೆಲಸವನ್ನು ಸರ್ಕಾರದವರು ಮಾಡಬೇಕು ಎಂಬ ಮನೋಭಾವದವರ ನಡುವೆ,ಸಣ್ಣ,ಸಣ್ಣ ಕೆಲಸಗಳ ಮೂಲಕ ಶಾಲೆಯ ತುರ್ತು ಅಗತ್ಯತೆಗೆ ಸೇವೆಯ ನೆಲೆಯಲ್ಲಿ ಯುವಕರು ಸ್ಪಂದಿಸಿರುವುದು ಮಾದರಿಯಾಗಿದೆ.