ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರು, ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮದಿನವನ್ನು ಅವರ ಅಭಿಮಾನಿಗಳು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು.ಅವರ 62ನೇ ಹುಟ್ಟು ಹಬ್ಬದ ಅಂಗವಾಗಿ ಕೊಂಡ್ಲಿ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರದಲ್ಲಿ ಪಟ್ಟಣದ ಶ್ರೇಯಸ್ ಆಸ್ಪತ್ರೆಯಲ್ಲಿ ಹುಬ್ಬಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಭಿಮಾನಿಗಳ ಗೌರವ ಸನ್ಮಾನವನ್ನು ಸ್ವೀಕರಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಾವು ಮಾನವೀಯತೆ ಮತ್ತು ಸಹೋದರತ್ವವನ್ನು ಬೆಳಸಿಕೊಳ್ಳಬೇಕು. ಮಾನವನಾಗಿ ಹುಟ್ಟಿದ ಮೇಲೆ ಸಮಾಜಮುಖಿಯಾಗಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು. ಪರಸ್ಪರರಲ್ಲಿ ಉತ್ತಮ ಬಾಂಧವ್ಯ ಬೆಳೆಯಬೇಕಾಗಿದೆ. ಇಲ್ಲವಾದರೆ ಸಮಾಜದಲ್ಲಿ ಅನಾಗರಿಕತೆ ಉಂಟಾಗುತ್ತದೆ. ನಾವು ರಚನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಸದಾ ಸಮಾಜಕ್ಕೆ ಒಳ್ಳೆಯದನ್ನು ಮಾಡುವಲ್ಲಿ ನಾವು ಮುಂದಾಗಬೇಕು. ರಕ್ತದಾನ ಒಂದು ಪವಿತ್ರವಾದ ಕಾರ್ಯವಾಗಿದೆ. ಈ ಭಾವನೆ ಯುವಜನರಲ್ಲಿ ಜಾಗೃತರಾಗಿರುವುದು ಶ್ಲಾಘನೀಯ ಎಂದರು.
ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಸಂಗ್ರಹ ಕೇಂದ್ರದ ಮುಖ್ಯಸ್ಥರಾದ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ರಕ್ತದಾನದಿಂದ ಸಮಾಜದ ಋಣವನ್ನು ತೀರಿಸಲು ಸಾಧ್ಯವಾಗಲಿದೆ.ರಕ್ತದಾನದಿಂದ ಮತ್ತೊಂದು ಜೀವವನ್ನು ಉಳಿಸಲು ಸಾಧ್ಯ. ನಾವು ಒಬ್ಬರಿಂದ ಪಡೆದ ರಕ್ತದಲ್ಲಿ ಅಗತ್ಯತೆ ಅನುಗುಣವಾಗಿ ಮೂವರಿಗೆ ನೀಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಶ್ರೀಧರ ವೈದ್ಯ ಮಾತನಾಡಿ, ತಾಲೂಕಿನಲ್ಲಿ ಇಂದು ಹಲವು ಅಭಿವೃದ್ಧಿಯನ್ನು ಕಾಣುತ್ತೇವೆ. ಹಿಂದುಳಿದ ತಾಲೂಕು ಎಂದು ಗುರುತಿಸಿಕೊಂಡಿರುವ ತಾಲೂಕು ಇಂದು ಆರೋಗ್ಯ, ಶಿಕ್ಷಣ, ಅಭಿವೃದ್ಧಿಯಲ್ಲಿ ಸಾಕಷ್ಟು ಮುಂದುವರಿದಿದೆ. ಇದು ಈ ಕ್ಷೇತ್ರದ ಶಾಸಕರಾಗಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಆಗಿದೆ. ಈ ಎಲ್ಲಾ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅವರ ಕಾಳಜಿ, ಆಸಕ್ತಿ ಕಾರಣವಾಗಿದೆ ಎಂದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವೀರಭದ್ರ ಪಾಟೀಲ್ ಶಿರಳಿ ಮಾತನಾಡಿದರು. ವೇದಿಕೆಯಲ್ಲಿ ಡಾ.ಸುಮಂಗಲಾ ವೈದ್ಯ ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ ಸದಸ್ಯ ಮಾರುತಿ ಟಿ.ನಾಯ್ಕ ಹೊಸೂರು ಸ್ವಾಗತಿಸಿದರು. ಗುರುರಾಜ ಶಾನಭಾಗ ಪ್ರಾಸ್ತಾವಿಕ ಮಾತನಾಡಿದರು. ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು.
ಅಭಿಮಾನಿಗಳ ಶುಭಹಾರೈಕೆ: ರಕ್ತದಾನ ಶಿಬಿರಕ್ಕೆ ಆಗಮಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿಮಾನಿಗಳು ಹಾಗೂ ಅಧಿಕಾರಿಗಳು ಅಭಿನಂದಿಸಿ ಜನುಮ ದಿನದ ಶುಭ ಹಾರೈಹಿಸಿದರು.
62 ಅಭಿಮಾನಿಗಳಿಂದ ರಕ್ತದಾನ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ 62 ನೇ ಜನ್ಮದಿನಕ್ಕೆ ಅವರ ಅಭಿಮಾನಿಗಳು ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಒಟ್ಟು 62 ಜನರು ರಕ್ತದಾನ ಮಾಡಿರುವುದು ವಿಶೇಷವಾಗಿತ್ತು.