ಶಿರಸಿ: ಇತ್ತೀಚಿನ ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆ ಹಾಗೂ ಶರಾವತಿ ಅಭಯಾರಣ್ಯ ಪರಿಸರ ಅತೀ ಸೂಕ್ಷ್ಮ ಪ್ರದೇಶ ನಿಗದಿಗೊಳಿಸಲು ಸುಪ್ರಿಂ ಕೋರ್ಟನ ಆದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುವುದಲ್ಲದೇ ಅರಣ್ಯ ಭೂಮಿ ಅವಲಂಬಿತವಾಗಿರುವ ಅರಣ್ಯವಾಸಿಗಳಿಗೆ ಆತಂಕ ಉಂಟಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ.
ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ವಿವಿಧ ಹತ್ತು ಜಿಲ್ಲೆಗಳಲ್ಲಿ ಒಟ್ಟು1597 ಹಳ್ಳಿಗಳನ್ನು ಸೇರಿಸಲಾಗಿದ್ದು, ಅದರಂತೆ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 704 ಹಳ್ಳಿಗಳು ಸೇರ್ಪಡೆಗೊಂಡಿರುವುದು ಎಂದು ಅವರು ಹೇಳಿದರು. ಅಲ್ಲದೇ, ಈಗಾಗಲೇ ಶರಾವತಿ ಅಭಯಾರಣ್ಯ ವ್ಯಾಪ್ತಿಯ ಜುಲೈ7,2019 ರ ಅಧಿಸೂಚನೆಯಂತೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಒಟ್ಟು 93016 ಹೇಕ್ಟರ್ ಪ್ರದೇಶ ಸೇರಿಸಲ್ಪಟ್ಟಿದ್ದಲ್ಲದೇ, ಗುರುತಿಸಿರುವ ಅಭಯಾರಣ್ಯ ಪ್ರದೇಶದ ಗಡಿಯಿಂದ 1ಕೀ.ಮೀ ಹೆಚ್ಚುವರಿಯಾಗಿ ಅತೀ ಸೂಕ್ಷ್ಮ ಪ್ರದೇಶ ನಿರ್ದಿಷ್ಟ ಪಡಿಸಬೇಕೆಂಬ ಇತ್ತೀಚಿನ ಸುಪ್ರಿಂ ಕೋರ್ಟನ ಆದೇಶದಿಂದ ಜಿಲ್ಲೆಯ ಸಂಪೂರ್ಣ ಜನಜೀವನ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವಂತಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿಗೆ ಮಾರಕ : ಕಸ್ತೂರಿರಂಗನ್ ಮತ್ತು ಅಭಯಾರಣ್ಯ ಪ್ರದೇಶದಲ್ಲಿ ಗುರುತಿಸಲಾದ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ, ರಸ್ತೆ, ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಬಂಧಿಸಿದ ಕೈಗಾರಿಕೆಗಳಿಗೆ ಕಡಿವಾಣ, ಆಧುನಿಕ ಪ್ರವಾಸೋದ್ಯಮಕ್ಕೆ ಮಾರಕ, ಟೌನ್‌ಶಿಫ್ ಮತ್ತು ಬಹುಮಡಿಗೆ ಕಟ್ಟಡಗಳಿಗೆ ನಿರ್ಬಂಧ, ವಾಣಿಜ್ಯಕರಣ ಮುಂತಾದ ನಿರ್ಬಂಧಕ್ಕೆ ಒಳಪಡುವದರಿಂದ ಗ್ರಾಮಸ್ಥರ ಜೀವನ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೇ ಅಭಿವೃದ್ಧಿಗೆ ಮಾರಕ ಉಂಟಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯ ಶೇ. 35 ರಷ್ಟು ಪರಿಸರ ಸೂಕ್ಷ್ಮ ಪ್ರದೇಶ : ಕಸ್ತೂರಿರಂಗನ್ ಮತ್ತು ಅಭಯಾರಣ್ಯ ಪ್ರದೇಶದ ಒಟ್ಟು ಕ್ಷೇತ್ರ ಹಾಗೂ ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಕ್ಷೇತ್ರವನ್ನು ಜಿಲ್ಲೆಯ ಒಟ್ಟು ಭೌಗೋಳಿಕ ಕ್ಷೇತ್ರವಾದ10571ಚ.ಕೀ.ಮೀ ಗೆ ತುಲನೆ ಮಾಡಿದರೆ, ಜಿಲ್ಲೆಯ ಒಟ್ಟು ಕ್ಷೇತ್ರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಶೇ. 35 ರಷ್ಟು ಆಗುವುದೆಂದು ರವೀಂದ್ರ ನಾಯ್ಕ ಹೇಳಿದ್ದಾರೆ.
ಕಸ್ತೂರಿ ರಂಗನ ವರದಿಯಂತೆ ಕಾರವಾರ ಜಿಲ್ಲೆಯಲ್ಲಿ ಗುರುತಿಸಿದ ಸೂಕ್ಷ್ಮ ಪ್ರದೇಶದ ವಿವರ: ಅಂಕೋಲಾ ತಾಲೂಕಿನಲ್ಲಿ 43 ಹಳ್ಳಿಗಳು,ಭಟ್ಕಳ 28, ಹೊನ್ನಾವರ 44, ಜೋಯಿಡಾ 96, ಕಾರವಾರ 36, ಕುಮಟ 42,ಸಿದ್ಥಾಪುರ 103, ಶಿರಸಿ 125,ಯಲ್ಲಾಪುರ 187 ಹಳ್ಳಿಗಳಂತೆ ಒಟ್ಟು 704 ಹಳ್ಳಿಗಳನ್ನು ಗುರುತಿಸಲಾಗಿದೆ.