ಶಿರಸಿ: ಧಾರ್ಮಿಕ,ಸಾಮಾಜಿಕ,ಕಲೆ,ಸಂಸ್ಕೃತಿ,ಶಿಕ್ಷಣದಂತಹ ಅನೇಕ ಒಳ್ಳೆಯ ಉದ್ದೇಶಗಳನ್ನೊಳಗೊಂಡು ಸ್ಥಾಪಿತವಾದ ಪ್ರಜ್ವಲ ಟ್ರಸ್ಟ್ ಆಧ್ಯಾತ್ಮ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಇತ್ತೀಚೆಗೆ ಉದ್ಘಾಟನೆಗೊಳಿಸಲಾಯಿತು. ರಾಘವೇಂದ್ರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಸಹಸ್ರ ಮೋದಕ ಹವನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಸುಧಾ ಶರ್ಮ ಸಾಗರ ಹಾಗೂ ವೃಂದದವರಿಂದ ವಿಭಿನ್ನ ರೀತಿಯ ಸಂಗೀತ ಕಾರ್ಯಕ್ರಮ ಜನಮಾನಸ ಗೆದ್ದಿತು. ಹಾರ್ಮೋನಿಯಂ ಸಾತ್ ಸತೀಶ್ ಹೆಗ್ಗಾರ್ ಮತ್ತು ತಬಲಾಸಾತ್ ಅನ್ನು ಗುರುರಾಜ್ ಆಡುಕಳ ಅವರು ನೀಡಿದರು. ನಂತರ ತೆರೆ ಮರೆಯ ಸಾಧಕರಾದ ಸುಬ್ಬಣ್ಣ ಮಂಗಳೂರು, ಮಂಜುನಾಥ್ ಹೆಗಡೆ ನೆಟ್ಗಾರ್ ಹಾಗೂ ರವೀಂದ್ರ ಹೆಗಡೆ ಅಳ್ಳಂಕಿ ಅವರನ್ನು ಸನ್ಮಾನಿಸಲಾಯಿತು.
ನಾಗೇಶ್ ಮಧ್ಯಸ್ಥ ಅವರು ರಚಿಸಿದ ಕವನ ಸಂಕಲನ ‘ಭಾವ ದೀಪ್ತಿ’ ಹಾಗೂ ಶ್ರೀಮತಿ ಬಿಂದು ಹೆಗಡೆ ಅವರ ಕಥಾ ಸಂಕಲನ ‘ಸಿಂಧುವಿನೊಳಗಿನ ಬಿಂದು’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸುನಿತಾ ಪ್ರಕಾಶ್ ದಾವಣಗೆರೆ ಹಾಗೂ ಪ್ರಸಾದ್ ಕುಲಕರ್ಣಿ ಬೆಳಗಾಂ ಇವರು ಪುಸ್ತಕ ಪರಿಚಯ ಮಾಡಿದರು. ಸುರೇಶ್ ಕೊರಕೊಪ್ಪ ಶುಭ ಕೋರಿದರೆ ಅಧ್ಯಕ್ಷತೆ ವಹಿಸಿದ ಖ್ಯಾತ ಸಾಹಿತಿ ವಿದ್ಯಾಧರ ಮುತಾಲಿಕ್ ದೇಸಾಯಿ ಮಾತನಾಡಿ ” ಪ್ರಜ್ವಲ ಅಂದರೆ ಜ್ಞಾನದ ಸಂಕೇತ ಅದನ್ನು ಬೆಳಗಿಸಲು ಪ್ರತಿಯೊಬ್ಬನ ಜ್ಞಾನವೆಂಬ ತೈಲ ಬೇಕೇ ಬೇಕು” ಅನ್ನುವುದರ ಜೊತೆಗೆ “ಯಾರ ಪುಸ್ತಕವೇ ಇರಲಿ ಅಕ್ಷರ ಮಾತೆಗೆ ಬೆಲೆ ಕೊಡಿ, ಕೊಂಡು ಓದಿ ಬರಹಗಾರರನ್ನು ಪ್ರೋತ್ಸಾಹಿಸಿ” ಎನ್ನುವ ಸಂದೇಶ ನೀಡಿದರು. ಶ್ರೀಮತಿ ಶ್ರೀಲತಾ ಗುರುರಾಜ್ ಅವರ ಭಾವಾಂತರಂಗ ಕಾರ್ಯಕ್ರಮ ಜನಮನ ಗೆದ್ದಿತು. ಮೈತ್ರೇಯಿ ಕಲಾ ಟ್ರಸ್ಟ್ ಕಲಾವಿದರಿಂದ ನೃತ್ಯ ರೂಪಕ ಹಾಗೂ ಕುಮಾರಿ ಸ್ನೇಹಶ್ರೀ ಹೆಗಡೆ ಅವರಿಂದ ಕುಚಿಪುಡಿ ನೃತ್ಯ ಪ್ರದರ್ಶನಗೊಂಡಿತು. ಸಂಧ್ಯಾಕಾಲದ ಹಣತೆ ಬೆಳಕಿನಲ್ಲಿ ನಡೆದ ಸಾಮೂಹಿಕ ರಾಮರಕ್ಷಾ ಸ್ತೋತ್ರ ಪಠಣವು ಕಾರ್ಯಕ್ರಮದ ಅತ್ಯಾಕರ್ಷಕ ಭಾಗವಾಗಿ ಗೋಚರಿಸಿತು.
ಪ್ರಜ್ವಲ ಟ್ರಸ್ಟಿನ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕುಮಾರಿ ಶ್ರೀರಕ್ಷಾ ಹೆಗಡೆ ಪ್ರಾರ್ಥನೆ ಹಾಡಿದರು. ಟ್ರಸ್ಟಿನ ಪದಾಧಿಕಾರಿಗಳಾದ ರಮೇಶ್ ಹೆಗಡೆ ಕಲಾವಿದರನ್ನು ಪರಿಚಯಿಸಿದರು. ಸುಮಾ ಹೆಗಡೆ ಇವರು ಸನ್ಮಾನ ಪತ್ರ ಓದಿದರೆ ರಾಘು ಹೆಗಡೆ ಹಾಗೂ ದತ್ತಾತ್ರೇಯ ಹೆಗಡೆ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ನಯನ .ಪಿ. ಹೆಗಡೆ ವಂದಿಸಿದರು. ಶ್ರೀಮತಿ ಸಿಂಧು ಚಂದ್ರ ಹಾಗೂ ಶ್ರೀಮತಿ ಕವಿತಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.