ಅಂಕೋಲಾ: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನದ ಪಡೆದ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಎಲ್.ಕೆ.ನಾಯ್ಕ ಮಾತನಾಡಿ, ನಿಮ್ಮ ಉನ್ನತ ಶಿಕ್ಷಣದಿಂದ ಬಡ- ಬಗ್ಗರಿಗೆ ಮುಂದಿನ ದಿನಗಳಲ್ಲಿ ದಾರಿ ದೀಪವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹುಬ್ಬಳ್ಳಿ- ಧಾರವಾಡ ನಾಮಧಾರಿ ಹಿತವರ್ದಕ ಸಂಘದ ಅಧ್ಯಕ್ಷ ಟಿ.ಡಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಹುಡುಕಿ ಅವರಿಗೆ ಮತ್ತಷ್ಟು ಉತ್ತೇಜನ ನೀಡಲು ಸನ್ಮಾನಿಸಿ ಗೌರವಿಸಿದ ವಿವೇಕಾನಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಎಸ್.ನಾಯ್ಕ, ರಾಮಚಂದ್ರ ಇ.ನಾಯ್ಕ, ಡಿ.ರಾಮಪ್ಪ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಂ.ಕರ್ಕಿಕರ್, ಸಂಘದ ಕೋಶಾಧ್ಯಕ್ಷ ಪ್ರಭಾಕರ ಕೆ.ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ 625ಕ್ಕೆ 625 ಪಡೆದ ಜಿಲ್ಲೆಯ ನಾಮಧಾರಿ ಸಮಾಜದ ವಿದ್ಯಾರ್ಥಿಗಳಾದ ಕುಮಟಾದ ದೀಕ್ಷಾ ಪಿ.ನಾಯ್ಕ, ಶಿರಸಿಯ ದೀಕ್ಷಾ ಆರ್.ನಾಯ್ಕ ಹಾಗೂ ಶಿರಸಿಯ ಕುಮಾರ ಚಿರಾಗ್ ಎಂ.ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಸಿಂಧು ಎಂ.ನಾಯ್ಕ, ಮೇಘನಾ ಪಿ.ನಾಯ್ಕ, ಹರ್ಷಿತಾ ಎಂ.ನಾಯ್ಕ, ನಾಗಶ್ರೀ ಎಂ.ನಾಯ್ಕ, ಸ್ವಾತಿ ಆರ್.ನಾಯ್ಕ, ಅನನ್ಯ ಯು.ನಾಯ್ಕ, ಮಾನ್ಯ ಎಂ.ನಾಯ್ಕ, ರಕ್ಷಿತಾ ವಿ.ನಾಯ್ಕ, ರಕ್ಷಾ ಎಚ್.ನಾಯ್ಕ, ಮೇಘನಾ ಡಿ.ನಾಯ್ಕ ಅವರಿಗೆ ಗೌರವಿಸಿ ಕಿರುಕಾಣಿಕೆ ನೀಡಲಾಯಿತು.
ಕಾರ್ಯಕ್ರಮವನ್ನು ಸುರೇಶ್ ನಾಯ್ಕ ಹೊಳೆಗದ್ದೆ ನಿರೂಪಿಸಿದರು. ಮಹಾಬಲೇಶ್ವರ ಜಿ.ನಾಯ್ಕ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಎಂ.ಎಂ.ಕರ್ಕಿಕರ್ ವಂದಿಸಿದರು. ಸ್ವಾಮಿ ವಿವೇಕಾನಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.