ಅಂಕೋಲಾ: ತಾಲೂಕಿನಲ್ಲಿ ಕಳೆದೆರಡು ದಿನದಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಂಗಾವಳಿ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಹಲವಾರು ಗ್ರಾಮಗಳು ಈ ವರ್ಷ ಮತ್ತೆ ನೆರೆ ಭೀತಿ ಎದುರು ನೋಡುತ್ತಿದೆ.
ಗಂಗಾವಳಿ ನದಿ ಪಾತ್ರದ ಮೋಟನಕುರ್ವೆ, ದಂಡೆಬಾಗ, ಕುರ್ವೆ ನಡುಗಡ್ಡೆಯ ಭಾಗದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದಲ್ಲದೆ ಕಲ್ಲೇಶ್ವರ- ಡೊಂಗ್ರಿ- ರಾಮನಗುಳಿ ಬಾಗದಲ್ಲಿಯು ನೀರಿನ ಮಟ್ಟ ಏರಿಕೆ ಆಗುತ್ತಿದೆ. ಗುಳ್ಳಾಪುರದಿಂದ ಕಲ್ಲೇಶ್ವರ- ಶೇವಕಾರ ಕೈಗಡಿಗೆ ಹೋಗುವ ತಾತ್ಕಾಲಿಕ ಸೇತುವೆ ಕೂಡ ನೀರಿನಲ್ಲಿ ಮುಳುಗಡೆ ಆಗಿದ್ದು, ಈ ಭಾಗದ ಸಂಪರ್ಕ ಕಡಿತಗೊಂಡಿದೆ.
ಮಂಜುಗುಣಿ ಮತ್ತು ಕೊಡ್ಸಣಿ ಬಳಿ ಸೇತುವೆ ನಿರ್ಮಾಣ ಮಾಡಲು ಗಂಗಾವಳಿ ನದಿಯಲ್ಲಿ ಹಾಕಲಾಗಿರುವ ಭಾರಿ ಪ್ರಮಾಣದ ಮಣ್ಣಿನಿಂದ ಈ ವರ್ಷ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ತಾಲೂಕಿನ ಅಚವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಟಕಣಿ ಕ್ರಾಸ್ ಬಳಿ ಸುಮಾರು ಅರ್ಧ ಘಂಟೆಗಳ ಕಾಲ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ.
ಡೊಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳವಳ್ಳಿ, ಅಚವೆ ಪಂಚಾಯತಿ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಮಾಬಗಿ, ಕಿರಿಯ ಪ್ರಾಥಮಿಕ ಶಾಲೆ ಚನಗಾರ, ಕಿರಿಯ ಪ್ರಾಥಮಿಕ ಶಾಲೆ ಮೋತಿಗುಡ್ಡ ಹಿಲ್ಲೂರು ಪಂಚಾಯಿತಿ ವ್ಯಾಪ್ತಿಯ ಕಿರಿಯ ಪ್ರಾಥಮಿಕ ಶಾಲೆ ಹೊಸಕಂಬಿ ಮತ್ತು ಹಿಚ್ಕಡ ಕೂರ್ವೆ ನಡುಗಡ್ಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸೋಮವಾರದಿಂದ ರಜೆ ಘೋಷಣೆ ಮಾಡಲಾಗಿದೆ.