ಮುಂಡಗೋಡ: ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರೇಣುಕಾ ಕೋಣನಕೇರಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯ ಒಟ್ಟು 13 ಮಂದಿ ಬಿಜೆಪಿ ಸದಸ್ಯರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೇಣುಕಾ ಅವರನ್ನು ಆಯ್ಕೆ ಮಾಡಿದರು. ಮೊದಲ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಅ ವರ್ಗದ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಬಂದಿತ್ತು. ಆಯ್ಕೆಯಾದವರಲ್ಲಿ ಇಬ್ಬರು ಅ ವರ್ಗದ ಮಹಿಳೆಯಾಗಿದ್ದರು. ಮೊದಲ ಅವಧಿಗೆ ನೇತ್ರಾ ಜಾಡರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಎರಡನೇ ಅವಧಿಗೆ ರೇಣುಕಾ ಕೋಣನಕೇರಿ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಮಾತಾಗಿತ್ತು.
ಹಿರಿಯರ ಮಾತಿನ ಪ್ರಕಾರ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ರೇಣುಕಾ ಕೋಣನಕೇರಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ್ ತಿಳಿಸಿದರು.
ಚುನಾವಣಾ ಅಧಿಕಾರಿಯಾಗಿ ತಾ.ಪಂ.ಇಒ ಪ್ರವೀಣ ಕಟ್ಟಿ ಕಾರ್ಯ ನಿರ್ವಹಿಸಿದರು. ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ರಾಜು ಗುಬ್ಬಕ್ಕನವರ, ಗೌರೀಶ ಹರಿಜನ, ಮಂಜುನಾಥ ಕೋಣನಕೇರಿ ಎಫ್.ಡಿ.ಗುಲ್ಯಾನವರ, ಪಿ.ಜಿ.ಪಾಟೀಲ, ವೈ.ಪಿ.ಪಾಟೀಲ, ಕೆಂಜೋಡಿ ಗಲಬಿ, ಸಂತೋಷ ತಳವಾರ, ಗ್ರಾಮಸ್ಥರು, ಪಿಡಿಒ ಸೋಮಲಿಂಗಪ್ಪ ಛಬ್ಬಿ ಇದ್ದರು. ಸಿಪಿಐ ಎಸ್.ಎಸ್.ಸಿಮಾನಿ ಮತ್ತು ಪಿಎಸ್‌ಐ ಬಸವರಾಜ ಮಬನೂರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವಹಿಸಿದ್ದರು.