ಸಿದ್ದಾಪುರ: ಸರಕಾರಿ ನೌಕರಿಯಲ್ಲಿದ್ದು, ಕೆಲಸವನ್ನು ನಿರ್ವಹಿಸುವಾಗ ಕೆಲಸದ ಮೇಲೆ ಪ್ರೀತಿ ಹಾಗೂ ಆಸಕ್ತಿ ಮತ್ತು ಶ್ರಮ, ನಿಷ್ಠೆ ಅತ್ಯಂತ ಅಗತ್ಯ. ನಮ್ಮ ಕಷ್ಟವೇನೇ ಇದ್ದರೂ ಅದನ್ನು ಬದಿಗೊತ್ತಿ ಸಾರ್ವಜನಿಕರ ಜೊತೆ ಸ್ಪಂದಿಸುವಾಗ ನಮ್ಮ ಮೊಗದಲ್ಲಿ ಸದಾ ನಗು ಇರಲಿ. ಅವರನ್ನು ಅತ್ಯಂತ ಗೌರವದಿಂದ ನೋಡುವ ಹಾಗೂ ಕಾನೂನುಗಳು ಸಮಯದ ಮಿತಿ ಎಷ್ಟಿದ್ದರೂ ಮಾನವೀಯತೆಯ ಹಿನ್ನೆಲೆಯಲ್ಲಿ ಅವರ ಕೆಲಸವನ್ನು ಮಾಡಿಕೊಡುವುದರ ಮೂಲಕ ನಮ್ಮ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ಬರಲು ಸಾಧ್ಯ ಎಂದು ಶಿರಸಿ ಅಂಚೆ ಇಲಾಖೆಯ ಅಂಚೆ ಅಧೀಕ್ಷಕ ಹೂವಪ್ಪ ಜಿ. ಅವರು ಹೇಳಿದರು.
ಅವರು ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಇಲಾಖೆಯ ಸಹಾಯಕ ಅಧಿಕಾರಿಯಾದ ಶಿವರಾಮ ನಾಯ್ಕ ಅಕ್ಕುಂಜಿ ಅವರ ನಿವೃತ್ತಿ ನಿಮಿತ್ತ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪ ಅಂಚೆ ಅಧೀಕ್ಷಕ ವೆಂಕಟೇಶ ಬಾದಾಮಿ ಮಾತನಾಡಿ, ಶಿವರಾಮ ನಾಯ್ಕ ಅವರು ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದು, ತಾಳ್ಮೆಯಿಂದ ವರ್ತಿಸಿದ್ದಾರೆ. ತಾಳ್ಮೆ ಎಂಬುದು ಕೆಲಸದ ಕಲಿಕೆಯಲ್ಲಿ ಸಾರ್ವಜನಿಕ ಸೇವೆ ನೀಡುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿ ನಿವೃತ್ತರಿಗೆ ಶುಭವನ್ನು ಕೋರಿದರು.
ಇನ್ನೋರ್ವ ಉಪ ಅಂಚೆ ಅಧೀಕ್ಷಕ ಅಕ್ಷಯ ಕಾಮತ, ಅಂಚೆ ಇಲಾಖೆಯ ಕೆಲಸ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ, ಶಿಸ್ತುಬದ್ಧವಾಗಿ ನಿರ್ವಹಿಸುವುದು ಅತ್ಯಂತ ಮುಖ್ಯವಾದುದು, ಅದನ್ನು ಇಲಾಖೆಯ ಎಲ್ಲಾ ಕಿರಿಯ, ಹಿರಿಯ ಅಧಿಕಾರಿಗಳು ಪಾಲಿಸಿಕೊಂಡು ಬರಬೇಕು ಎಂದು ಹೇಳಿದರು. ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಧಿಕಾರಿ ಶಂಕರ ಹೆಗಡೆ ಮಾತನಾಡಿ, ಶಿವರಾಮ ನಾಯ್ಕರವರು ತಮ್ಮ ಕಚೇರಿಯಲ್ಲಿ ಅತ್ಯಂತ ಜವಾಬ್ದಾರಿಯಿಂದ ಕೆಲಸವನ್ನು ನಿರ್ವಹಿಸಿದ್ದಾರೆ. ಅವರು ಸದಾ ಕೆಲಸದಲ್ಲಿ ತೊಡಗಿಕೊಳ್ಳುವ ಸ್ವಭಾವದವರಾಗಿದ್ದರು ಎಂದು ಶ್ಲಾಘಿಸಿದರು.
ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಮತ್ತು ಅಂಚೆ ಕಚೇರಿಯ ನಿವೃತ್ತ ಪ್ರಧಾನ ಅಧಿಕಾರಿ ಎನ್.ಡಿ.ನಾಯ್ಕ ಮಾತನಾಡಿ ನಿವೃತ್ತರಿಗೆ ಶುಭ ಕೋರಿದರು. ನಿವೃತ್ತ ಶಿವರಾಮ ನಾಯ್ಕ ಅಕ್ಕುಂಜಿ ಮಾತನಾಡಿ, ನಾನು 40 ವರ್ಷಗಳ ಸೇವೆಯನ್ನು ಅಂಚೆ ಇಲಾಖೆಯಲ್ಲಿ ನಿರ್ವಹಿಸಿದ್ದು, ವಿವಿಧ ಹಂತಗಳಲ್ಲಿ ಕೆಲಸ ಮಾಡಿ ಸಾಧ್ಯವಾದಷ್ಟು ಅನುಭವಗಳನ್ನು ಸಂಪಾದಿಸಿಕೊಂಡು ಅಂಚೆ ಗ್ರಾಹಕರೊಡನೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದೇನೆ. ಕೆಲಸ ಮಾಡಿದ ಬಗ್ಗೆ ನನಗೆ ತೃಪ್ತಿಯಿದೆ. ಅಂಚೆ ಇಲಾಖೆಯಲ್ಲಿ ಸೇವೆ ನೀಡಿದ ಬಗ್ಗೆ ಸಂತೋಷವಿದೆ ಎಂದು ಹೇಳಿದರು. ತಮಗಿತ್ತ ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು. ವೇದಿಕೆಯಲ್ಲಿ ಶಿವರಾಮ ನಾಯ್ಕರವರ ಪತ್ನಿ ಸವಿತಾ ಉಪಸ್ಥಿತರಿದ್ದರು. ನಿವೇದಿತಾ ಆಚಾರಿ ಅವರು ಪ್ರಾರ್ಥಿಸಿದರು. ವಿಜಯ ಕಾನಡೆ ಸ್ವಾಗತಿಸಿ ನಿರೂಪಿಸಿದರು. ಕುಮಾರ ನಾಯ್ಕ ವಂದಿಸಿದರು.