ಕುಮಟಾ: ತಾಲೂಕಿನ ಧಾರೇಶ್ವರದ ಜನತಾ ವಿದ್ಯಾಲಯದಲ್ಲಿ ನ್ಯಾಯಮೂರ್ತಿ ಅಮ್ಮೆಂಬಳ ನಾರಾಯಣ ಪೈ ಸ್ಮರಣಾರ್ಥ ಕೆನರಾ ಬ್ಯಾಂಕ್ ಜ್ಯುಬಿಲಿ ಎಜ್ಯುಕೇಶನ್ ಫಂಡ್ ಬೆಂಗಳೂರು ಹಾಗೂ ಹೊನ್ನಾವರದ ಸಂಗಮ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಮಾತನಾಡಿ ಪ್ರಯತ್ನ, ಛಲ ಹಾಗೂ ತ್ಯಾಗ ಯಶಸ್ಸಿಗೆ ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪ್ರತಿಭಾ ಪುರಸ್ಕಾರ ಸಹಕಾರಿಯಾಗುತ್ತದೆ ಎಂದು ಹೇಳಿದರು.
ವೃತ್ತಿ ಪ್ರವೃತ್ತಿಯವರಿಗೆ ನಿವೃತ್ತಿ ಇರುವುದಿಲ್ಲ. ಅದರಂತೆ ಕಟಪಾಡಿ ಉಡುಪಿಯ ನಿವೃತ್ತ ಪ್ರಾಂಶುಪಾಲೆ ಲಕ್ಷ್ಮಿಬಾಯಿ ನೇತೃತ್ವದಲ್ಲಿ ನಡೆಸುವ ಈ ಕಾರ್ಯಕ್ರಮ ಮಕ್ಕಳಿಗೆ ಮಾದರಿಯಾಗಿದೆ ಎಂದರು.
ಅನುಷಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವಿಂದ್ರ ಶೆಟ್ಟಿ ಸ್ವಾಗತಿಸಿದರು. ಕಟಪಾಡಿ ಉಡುಪಿಯ ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀಬಾಯಿ ನಗದು, ಪ್ರಮಾಣ ಪತ್ರ ಹಾಗೂ ಯೋಗಕ್ಕೆ ಸಂಬಂಧಿಸಿದ ಪುಸ್ತಕ ಪ್ರತಿಭಾವಂತ ಮಕ್ಕಳಿಗೆ ನೀಡುವುದರ ಮೂಲಕ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಕೆಎಲ್‌ಇ ಸೊಸೈಟಿಯ ಕೌಟುಂಬಿಕ ಸಲಹಾ ಕೇಂದ್ರ ತಿಮ್ಮಣ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದ ರವಿ.ಜಿ.ಕೆ ಸ್ವ ಉದ್ಯೋಗದ ಅನಿವಾರ್ಯತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸ್ಥಳೀಯ ಮುಖ್ಯಾಧ್ಯಾಪಕ ಗೋಪಿ ಸಂಜೀವ ಭಾಜ್ರಂತಿ, ಎಸ್‌ಬಿಸಿಯ ಅಧ್ಯಕ್ಷ ಆನಂದು ಶಾನಭಾಗ ಮಣಿಪಾಲದ ಮುಕ್ತಾ ಭಟ್ ಉಪಸ್ಥಿತರಿದ್ದರು.