ಕಾರವಾರ: ಕೆನರಾ ಬ್ಯಾಂಕ್ ಚೆಂಡಿಯಾ ವತಿಯಿಂದ ತೋಡೂರು ಮತ್ತು ಚೆಂಡಿಯಾ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ, ತೋಡೂರು ಗ್ರಾಮದ ಮಾರುತಿ ಮಂದಿರ ಸಭಾಭವನದಲ್ಲಿ ಆರ್ಥಿಕ ಸೇರ್ಪಡೆ ಯೋಜನೆಗಳ ಸ್ಯಾಚುರೇಶನ್ ಅಭಿಯಾನವನ್ನು ಕೆನರಾ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ರೆಡ್ಡಿ ಮಂಗಳವಾರ ಉದ್ಘಾಟಿಸಿದರು.
ಜಿಲ್ಲಾ ಅಗ್ರಣಿ ವ್ಯವಸ್ಥಾಪಕ ರಾಜಪ್ಪ ಗೌಳಿ, ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬ್ಯಾಂಕಿನ ಎಲ್ಲಾ ಅರ್ಹ ಗ್ರಾಹಕರು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ವಾರ್ಷಿಕ 20 ರೂ), ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ವಾರ್ಷಿಕ 436 ರೂ) ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಜುಲೈ 2025 ರಿಂದ ಸೆಪ್ಟೆಂಬರ 2025 ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನ ನಡೆಯುತಿದ್ದು ಎಲ್ಲರೂ ವಿಮೆಯನ್ನು ಮಾಡಿಸಿಕೊಂಡು ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ನಾಗರಾಜ ಪಿ. ಶೇಟ್ ನಿರೂಪಿಸಿ, ವಂದಿಸಿದರು.