ಮಳೆಮಾಪನ ಸರಿಪಡಿಸಿ, ಸೂಕ್ತ ಕ್ರಮಕೈಗೊಳ್ಳಲು ಬಿಜೆಪಿಯಿಂದ ಮನವಿ ಸಲ್ಲಿಕೆ
ಸಿದ್ದಾಪುರ: ತಾಲೂಕಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗುತ್ತಿದ್ದರೂ ಸರಿಯಾಗಿ ಬೆಳೆ ವಿಮೆ ರೈತರಿಗೆ ಸಿಗುತ್ತಿಲ್ಲ ಇದಕ್ಕೆ ಕಾರಣ ಮಳೆಮಾಪನಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮಳೆಮಾಪನವನ್ನು ಸರಿಪಡಿಸಿ ಸರಿಯಾದ ಮಳೆ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿ ಮಂಡಳ ಬಿಜೆಪಿ ಕಾರ್ಯಕರ್ತರು ಅಧ್ಯಕ್ಷ ತಿಮ್ಮಪ್ಪ ಮಡಿವಾಳ ನೇತೃತ್ವದಲ್ಲಿ ಬುಧವಾರ ತಹಸೀಲ್ದಾರ ಮಧುಸೂದನ ಕುಲಕರ್ಣಿ ಮೂಲಕ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಮೇ ಅಂತ್ಯದಿಂದ ಜೂನ್ ತಿಂಗಳು ಪೂರ್ತಿ ಭಾರಿ ಮಳೆಯಾಗುತ್ತಿದೆ. ವಾಡಿಕೆ ಮಳೆಗಿಂತ ಶೇ.೧೦೦ಕ್ಕಿಂತಲೂ ಹೆಚ್ಚು ಮಳೆಯಾಗಿದೆ.ಭಾರಿ ಮಳೆ ಮತ್ತು ತೇವಾಂಶದ ಕಾರಣದಿಂದ ಅಡಿಕೆ ಫಸಲಿಗೆ ಅಲ್ಲಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿದೆ.ತಾಲೂಕಿನ ರೈತರು ಈಗಾಗಲೇ ಬೆಳೆಸಾಲದೊಂದಿಗೆ ಬೆಳೆ ವಿಮೆಯ ಕಂತನ್ನು ತುಂಬುತ್ತಿದ್ದಾರೆ.ಇಲ್ಲಿನ ಮಳೆಮಾಪಕ ಯಂತ್ರಗಳು ಬಹುತೇಕ ನಿರುಪಯುಕ್ತವಾಗಿವೆ ಹಾಗೂ ಇನ್ನುಳಿದ ಕೆಲವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆನ್ನುವ ಮಾಹಿತಿ ಇದೆ. ಮಳೆಯಿಂದಾಗುವ ಅನಾಹುತಕ್ಕೆ ಹವಾಮಾನ ಆಧಾರಿತ ಬೆಳೆ ವಿಮೆಯ ಸೌಲಭ್ಯವನ್ನು ಪಡೆಯಬೇಕೆಂದರೆ, ಮಳೆಮಾಪಕ ಯಂತ್ರಗಳ ಕಾರ್ಯನಿರ್ವಹಣೆ ಯೋಗ್ಯವಾಗಿ ಆಗಬೇಕು.ರೈತರಿಗೆ ಬೆಳೆವಿಮೆಯ ಸೌಲಭ್ಯ ಸಿಗಬೇಕೆಂದರೆ ವೈಜ್ಞಾನಿಕವಾಗಿ ಮಳೆಮಾಪನ ಪ್ರತಿ ದಿನ ಆಗಬೇಕಾಗಿರುವುದು ಅನಿವಾರ್ಯವಾಗಿರುತ್ತದೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಜೂನ್-ಜುಲೈ ತಿಂಗಳಿನಲ್ಲಿ ವಿಮಾ ಕಂಪನಿಗಳಿಗೆ ಹಿಮ್ಮಾಹಿತಿ ಸಿಗದಿದ್ದರೆ ರೈತರಿಗೆ ಬಹಳ ನಷ್ಟವಾಗುತ್ತದೆ. ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ.ಇನ್ನೂವರೆಗೆ ಮಳೆಮಾಪನದ ಟೆಂಡರ್ ಪಡೆದಿರುವ ಕಂಪನಿಯವರು ಮಳೆಮಾಪನ ಯಂತ್ರಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಪರಿಶೀಲಿಸಿದ್ದಾಗಲೀ, ದುಃಸ್ಥಿತಿಯಲ್ಲಿರುವ ಯಂತ್ರಗಳನ್ನು ರಿಪೇರಿಗೊಳಿಸಿದ್ದಾಗಲೀ ಇರುವುದಿಲ್ಲ. ಈಗಾಗಲೇ ಜೂನ್ ತಿಂಗಳು ಕಳೆದಿದ್ದು,ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದೆ. ಸುರಿದಿರುವ ಮಳೆಯ ಮಾಹಿತಿ ಏನಾಗಿದೆ ಎಂಬುದು ರೈತರಿಗೆ ಅರಿಯದೆ ರೈತರನ್ನು ಆತಂಕಕ್ಕೀಡು ಮಾಡಿದೆ.
ಗ್ರಾಮ ಪಂಚಾಯತಿಗಳ ಆವರಣಗಳಲ್ಲಿರುವ ಮಳೆಮಾಪನ ಯಂತ್ರಗಳಲ್ಲಿ ಆಯಾ ಪಂಚಾಯತಗಳಲ್ಲಿ ಸುರಿದಿರುವ ಮಳೆ ಪ್ರಮಾಣವು ಎಷ್ಟೆಂಬುದರ ಮಾಹಿತಿ ಪ್ರತಿದಿನವು ಗ್ರಾಮ ಪಂಚಾಯತಿಗಳಲ್ಲೇ ಸಿಗುವಂತಾಗಬೇಕು. ಹದಿನೈದು ದಿನಗಳಲ್ಲಿ ವ್ಯವಸ್ಥೆ ಸರಿಯಾಗದೇ ಇದ್ದರೆ ರೈತರನ್ನು ಒಗ್ಗೂಡಿಸಿ ತಹಶೀಲ್ದಾರ ಕಚೇರಿಯ ಎದುರು ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ,ಸದಸ್ಯರಾದ ರವಿಕುಮಾರ ನಾಯ್ಕ,ನಂದನ ಬೋರ್ಕರ್,ಗುರುರಾಜ ಶಾನಭಾಗ,ಪ್ರಮುಖರಾದ ವೆಂಕಟೇಶ ಮೇಸ್ತ,ದಿವಾಕರ ನಾಯ್ಕ,ಶ್ರೀಕಾಂತ ಭಟ್ಟ,ಎಸ್.ಕೆ.ಮೇಸ್ತ ಮುಂತಾದವರು ಉಪಸ್ಥಿತರಿದ್ದರು.