ಜೋಯಿಡಾ:ತಾಲೂಕಿನ ರಾಮನಗರ ಕ್ಲಸ್ಟರ್ ವ್ಯಾಪ್ತಿಯ ಶಿಂದೋಳಿ ಶಾಲೆಯ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ತಂದೆ ತಾಯಿಗಳ ಪಾದ ಪೂಜೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾದೇವತೆಯಾದ ಶಾರದಾ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ, ದೀಪ ಬೆಳಗಿಸಿ ಶಾಲೆಯ ಕ್ರಿಯಾಶೀಲ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ ಚಾಲನೆ ನೀಡಿದರು.ಉಪಾಧ್ಯಕ್ಷೆ ತನುಜಾ ಮಸೂರಕರ,ಗ್ರಾಮ ಪಂಚಾಯತ ಸದಸ್ಯರಾದ ನಾರಾಯಣ ಕಾಪೋಲಕರ, ಸದಸ್ಯರು,ಶಿಕ್ಷಕರು ಸಹಕಾರ ನೀಡಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ನಮ್ಮ ಕ್ರಿಯಾಶೀಲ ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದ್ದು,ವಿಶೇಷವಾಗಿ ಈ ವರ್ಷದ 7ನೇ ತರಗತಿಯ ವಿದ್ಯಾರ್ಥಿಗಳು ಕ್ರೀಡೆ,ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆ, ರಾಜ್ಯಮಟ್ಟದಲ್ಲೂ ಮಿಂಚಿ ನಮ್ಮ ಶಾಲೆ, ಊರಿನ ಹೆಸರಿನ ಕೀರ್ತಿಯನ್ನು ಹೆಚ್ಚಿಸಿದ್ದು ನಮಗೆ ಹೆಮ್ಮೆಯಿದೆ,ಮುಂದಿನ ಶೈಕ್ಷಣಿಕ ಜೀವನದಲ್ಲೂ ಎಲ್ಲಾ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿ ಎಂದು ಶುಭ ಹಾರೈಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ನಮ್ಮ ಹಾಗೂ ಪಾಲಕರ, ಪೋಷಕರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ವಿಭಾಗದ ಎಲ್ಲಾ ಕ್ಷೇತ್ರಗಳಲ್ಲಿ ತಾಲೂಕಾ,ಜಿಲ್ಲಾ,ರಾಜ್ಯ ಮಟ್ಟದಲ್ಲಿ ನಮ್ಮ ಶಾಲೆಯ ಹೆಸರನ್ನು ಮಿಂಚಿಸಿದ ಕೀರ್ತಿಯ ಬಗ್ಗೆ ನಮಗೆ ವಿಶೇಷವಾದ ಗೌರವ,ಅಭಿಮಾನ ಇದ್ದು,ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಿದೆ,ನಿಮ್ಮ ಸಾಧನೆಗಳು ಹೀಗೆ ಮುಂದುವರೆಯಲಿ, ಉನ್ನತ ಶಿಕ್ಷಣ,ಉದ್ಯೋಗದಲ್ಲಿ ಯಶಸ್ಸಿನ ಮೆಟ್ಟಲೇರಿ ಪ್ರಾಥಮಿಕ ಶಿಕ್ಷಣದ ಅಡಿಪಾಯವನ್ನು ನೀಡಿದ ಶಾಲೆಗೆ ತಮ್ಮ ಕೊಡುಗೆಯನ್ನು ನೀಡಲು ಮರೆಯದೇ ಭವಷ್ಯತ್ತಿನ ಜೀವನದಲ್ಲಿ ಸಮಾಜಪಯೋಗಿ ವ್ಯಕ್ತಿಯಾಗಿ ಬದುಕಬೇಕು, ಮುಂದಿನ ಶೈಕ್ಷಣಿಕ ತರಗತಿಗಳಲ್ಲಿ ಉತ್ತಮ ವಿದ್ಯಾರ್ಜನೆ ಮಾಡುವುದರ ಮೂಲಕ ಪಾಲಕರಿಗೆ, ಶಾಲೆಗೆ,ಊರಿಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಸಹ ಶಿಕ್ಷಕರಾದ ಆನಂದ ಪಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶಿಸ್ತು ಮತ್ತು ಸಮಯದ ಮಹತ್ವವನ್ನು ಸರಿಯಾಗಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ಸಿಗುತ್ತದೆ, ವಿದ್ಯಾರ್ಥಿಗಳು ಪರಿಶ್ರಮದ ಮೂಲಕ ತಮ್ಮ ಶೈಕ್ಷಣಿಕ ಜೀವನವನ್ನು ಗಟ್ಟಿಗೊಳಿಸುತ್ತಾ ಯಶಸ್ಸಿನ ಹೆಜ್ಜೆ ಇಡಬೇಕೆಂದು,ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದರು. ಶಿಕ್ಷಕಿ ವಿದ್ಯಾ ಮಾತನಾಡುತ್ತಾ ವಿದ್ಯಾರ್ಥಿಗಳು ಕಲಿತ ಶಾಲೆಗೆ,ವಿದ್ಯೆ ಕಲಿಸಿದ ಗುರುಗಳನ್ನು ಯಾವಾಗಲೂ ಗೌರವದಿಂದ ಕಾಣಬೇಕು,ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಎಲ್ಲರ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಅಸು ಗ್ರಾಮ ಪಂಚಾಯತ ಸದಸ್ಯರಾದ ನಾರಾಯಣ ಕಾಪೋಲಕರ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಿದ್ದು ಮುಂದಿನ ಶೈಕ್ಷಣಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಎಲ್ಲರ ಗೌರವವನ್ನು ಹೆಚ್ಚಿಸಿ,ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳ ವ್ಯಕ್ತಿತ್ವದ ಉತ್ತಮ ಸಂಸ್ಕಾರದ ಭಾಗವಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿಧ್ಯಾರ್ಥಿಗಳು ತಮ್ಮ ಇಲ್ಲಿಯವರೆಗಿನ ಹಾಗೂ ಮುಂದಿನ ಉತ್ತಮ ಭವಿಷ್ಯಕ್ಕೆ ಕಾರಣಕರ್ತರಾಗಿರುವ ತಂದೆ ತಾಯಿಗಳ ಪಾದ ಪೂಜೆಯನ್ನು ನೀರಿನಿಂದ ತೊಳೆದು, ಬಟ್ಟೆಯಿಂದ ಒರೆಸಿ,ಅರಿಶಿಣ ಕುಂಕುಮ ಹಚ್ಚಿ,ಹೂ ಮುಡಿಸಿ, ಅಗರಬತ್ತಿ, ಆರತಿ ಎತ್ತಿ ಸಾಷ್ಟಾಂಗ ನಮಸ್ಕಾರ ಮಾಡಿ ಜೊತೆಯಲ್ಲಿ ಗುರುಗಳ, ಹಿರಿಯರ ಆಶೀರ್ವಾದ ಪಡೆದರು. ವಿಧ್ಯಾರ್ಥಿಗಳು ಸಹ ಮಾತನಾಡಿ ನಮಗೆ ಮನೆಯಲ್ಲಿ ತಂದೆ ತಾಯಿಗಳ ಮಾರ್ಗದರ್ಶನ, ಗುರು ಹಿರಿಯರ ಪ್ರೋತ್ಸಾಹ, ಗುರುಗಳ ಅಕ್ಷರ ಜ್ಞಾನದ ಕೊಡುಗೆ, ಸಹಪಾಠಿಗಳ ಒಡನಾಟ, ಅನ್ನ ದಾಸೋಹ ನೀಡಿದ ಬಿಸಿಯೂಟ ಅಡುಗೆಯವರ ಬಗ್ಗೆ ಶಾಲೆಯಲ್ಲಿ ಕಲಿಕೆಯ ತಮ್ಮ ಸಿಹಿ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳಾದ ನಾಗರಾಜ ಮಸೂರಕರ,ತುಕಾರಾಮ ಠಾಕೂರ, ಪ್ರಮೋದ ವಟಲೆಕರ,ದೇವಿದಾಸ ಗಾವಡೆ,ವಾಸುದೇವ ಕಾಪೋಲಕರ,ನಾಮದೇವ ಮಿರಾಶಿ,ಸಂಜಯ ಗಾಂವಕರ,ನಾರಾಯಣ ಮಿರಾಶಿ, ಚಂದ್ರಭಾಗಾ ಗಾವಡೆ,ಆನಂದಿ ಕರಂಜೋಳಕರ,ಪೂಜಾ ವಟ್ಲೇಕರ,ನವೀತಾ ಮಿರಾಶಿ,ನಂದಿನಿ ಕಾಪೋಲಕರ, ಸುನಂದಾ ಮಿರಾಶಿ,ಅಂಬಿಕಾ ಮಾಜಾಳಕರ,ರಾಮೇಶ್ವರಿ ಗೋವಿಲ್ಕರ್, ಶಾಲೆಯ ಹಳೆಯ ವಿದ್ಯಾರ್ಥಿಯಾದ ಕುಮಾರಿ ನಿವೇದಿತಾ ಮಿರಾಶಿ, ಪಾಲಕರು,ಪೋಷಕರು, ಬಿಸಿಯೂಟ ಅಡುಗೆಯವರು, ಉಪಸ್ಥಿತರಿದ್ದರು.