ಹೊನ್ನಾವರ:ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ಶಿಕ್ಷಣ ನೀಡಬೇಕಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಚಾಮರಾಜನಗರ ವಿವಿ ಉಪ ಕುಲಪತಿ ಎಂ.ಆರ್. ಗಂಗಾಧರ ಅಭಿಪ್ರಾಯಪಟ್ಟರು.
ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ,ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಹಾಗೂ ಸಿಲೆಕ್ಟ್ ಫೌಂಡೇಶನ್ ವತಿಯಿಂದ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಹಮ್ಮಿಕೊಂಡಿರುವ ಸಂಸ್ಕೃತಿ ಕುಂಭ ಮಲೆನಾಡು ಉತ್ಸವ,ಪ್ರತಿಷ್ಠಾ ಮಹೋತ್ಸವ, ಜಾತ್ರಾ ಮಹೋತ್ಸವ ಹಾಗೂ ಮಾರುತಿ ಗುರೂಜಿ ಪೀಠಾರೋಹಣ ರಜತಮಹೋತ್ಸವದ ಅಂಗವಾಗಿ ನಡೆದ ಶೈಕ್ಷಣಿಕ ಸಮ್ಮೇಳನ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಗುರುಕುಲ ಪದ್ಧತಿ ಹಾಗೂ ಪ್ರಾಯೋಗಿಕ ಶಿಕ್ಷಣ ವಿಧಾನ ಮರೆಯಾಯಿತು.ಪ್ರಸ್ತುತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಅವರು ಹೇಳಿದರು.
ಮೈಸೂರು ವಿವಿಯ ದೊರೆರಾಜ್,ವಕೀಲ ಎನ್.ವಿ.ಯಾಜಿ,ಸುಬ್ರಹ್ಮಣ್ಯ ಭಾರತಿ ಕುನಾಲೆ ಸಂವಾದದಲ್ಲಿ ಭಾಗವಹಿಸಿದರು. ಅಜಿತ್ ಸ್ವಾಗತಿಸಿದರು. ಶೈಲೇಶ ನಿರೂಪಿಸಿದರು.ಬಾಲಕೃಷ್ಣ ವಂದಿಸಿದರು.