Slide
Slide
Slide
previous arrow
next arrow

ಮಳೆಮಾಪನ ಕೇಂದ್ರದ ಸಮರ್ಪಕ ನಿರ್ವಹಣೆಗೆ ಸಂಸದ ಕಾಗೇರಿ ಆಗ್ರಹ

300x250 AD

ಶಿರಸಿ: ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಪರಿಹಾರ ವಿತರಣೆಗೆ ತೊಡಕಾಗುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲೆಯ ಸ್ವಯಂ ಚಾಲಿತ ಹವಾಮಾನ ಮತ್ತು ಮಳೆ ಮಾಪನ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಜಾಸ್ತಿ ಇದೆಯಲ್ಲದೇ ಹವಾಮಾನ ಕೂಡ ಕೆಲವೊಮ್ಮೆ ರೈತರಿಗೆ ಪೂರಕವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯ ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ೨೦೧೬ರಿಂದಲೇ ಜಾರಿಯಲ್ಲಿದೆ. ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಡಕೆ, ತೆಂಗು, ಬಾಳೆ , ಮಾವು, ಕಾಳು ಮೆಣಸು ಮತ್ತು ಶುಂಠಿ ಬೆಳೆ ಪ್ರಮುಖವಾಗಿವೆ. ಪ್ರಕ್ರತಿ ವಿಕೋಪ ಉಂಟಾದಾಗ ಜಿಲ್ಲೆಯ ಈ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ನೆರವಿಗೆ ಬರುತ್ತದೆ. ಕಂದಾಯ ಇಲಾಖೆ ಅಡಿಯಲ್ಲಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನೀಡುವ ಹವಾಮಾನ ದತ್ತಾಂಶ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಪರಿಹಾರ ಮಂಜೂರಿಗೆ ಪ್ರಮುಖ ಮಾನದಂಡವಾಗಿದೆ. ಈ ಸಂಸ್ಥೆ ಹೋಬಳಿ ಮಟ್ಟದಲ್ಲಿ ಸ್ವಯಂ ಚಾಲಿತ ಮಳೆ ಮಾಪನ ನಡೆಸಿ ಮಾಹಿತಿ ರವಾನಿಸುತ್ತಿದೆ.
೨೦೨೩ರಲ್ಲಿ ಕ್ಷೆಮಾ ಜನರಲ್ ಇನ್ಸೂರೆನ್ ಕಂಪನಿ ಜಿಲ್ಲೆಯ ಹವಾಮಾನ ಆಧಾರಿತ ಬೆಳೆ ವಿಮೆಯ ಕಂತು ತುಂಬಿಸಿಕೊಂಡ ಅಧಿಕೃತ ಸಂಸ್ಥೆಯಾಗಿದೆ. ಕಳೆದ ಮಳೆಗಾಲದ ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಅಡಕೆ ಸೇರಿದಂತೆ ವಿವಿಧ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯ ೧೯೫ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ಹಾನಿಯಾಗಿದ್ದು, ಕ್ಷೆಮಾ ಸಂಸ್ಥೆ ಕಳೆದ ಅಕ್ಟೋಬರ್ ತಿಂಗಳ ವೇಳೆ ಪರಿಹಾರ ವಿತರಣೆ ಮಾಡಬೇಕಿತ್ತು. ಆದರೆ, ಕಳೆದ ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಯ ೫೯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಪರಿಹಾರ ಹಣ ಜಮಾ ಮಾಡಿದೆ. ಉಳಿದ ೧೩೬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಮಾಪನ ಕೇಂದ್ರದ ದತ್ತಾಂಶ ಸರಿ ಇಲ್ಲ ಎಂದು ಪರಿಹಾರ ವಿತರಣೆಗೆ ನಿರಾಕರಿಸಿ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿತ್ತು. ಈ ರೀತಿ ತಾಂತ್ರಿಕ ಕಾರಣವನ್ನು ಕಂಪನಿ ನೀಡಿರುವುದು ವಿಷಾದ. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ಬಾಕಿ ಉಳಿದ ೧೩೬ ಗ್ರಾಮ ಪಂಚಾಯಿತಿ ರೈತರಿಗೆ ನೀಡಬೇಕಾದ ಪರಿಹಾರವನ್ನು ಒಂದು ವಾರದೊಳಗೆ ರೈತರ ಖಾತೆಗೆ ಜಮಾ ಮಾಡುವಂತೆ ಸೂಚಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಗೆ ಒಳಪಟ್ಟಿರುವ ಜಿಲ್ಲೆಯ ಸ್ವಯಂಚಾಲಿತ ಹವಾಮಾನ ಮತ್ತು ಮಳೆ ಮಾಪನ ಕೇಂದ್ರಗಳ ನಿರ್ವಹಣೆ ಕೈಗೊಳ್ಳಬೇಕಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ಕೇಂದ್ರಗಳ ಸೂಕ್ತ ನಿರ್ವಹಣೆ ಮಾಡುವಂತೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಗೆ ಸೂಕ್ತ ಸೂಚನೆ ನೀಡಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top