ಶಿರಸಿ: ಜೀವನದಲ್ಲಿ ಪರಿಪೂರ್ಣ ಆನಂದ ಬೇಕಾದರೆ ಸದಾ ಭಗವಂತನ ಧ್ಯಾನ ಮಾಡಿ ಅವನ ಮೊರೆ ಹೋಗಬೇಕು ಎಂದು ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಮಠಾದೀಶರಾದ ಪ. ಪೂ. ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು. ಯಾರ ಕೈಯಲ್ಲಿ ಸ್ವಾಯತ್ತತೆ ಇದೆಯೋ, ಯಾರ ಕೈಯಲ್ಲಿ ಎಲ್ಲವೂ ಸಾಧ್ಯವೋ ಅವನೇ ಭಗವಂತ ಎಂದರು. ಅವರು ಶಿರಸಿ ಮರಾಠಿ ಕೊಪ್ಪ ವಿಶಾಲ ನಗರದ ವಿನಾಯಕ ಪಾಂಡುರಂಗ ಶೇಟ್ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಭಗವಂತನಿಗೆ ಎಲ್ಲವೂ ಗೊತ್ತು, ಸುಖ ಕೊಡುವವನು ಅವನೇ, ದುಃಖ ಕೊಡುವವನು ಅವನೇ. ನಗಿಸುವವನು ಅವನೇ, ಅಳಿಸುವವನು ಅವನೇ. ಹಾಗೆಯೇ ಸುಖಕ್ಕೂ ಕೂಡ ದಾರಿ ಇಟ್ಟಿದ್ದಾನೆ. ಜೀವನದಲ್ಲಿ ಪರಿಪೂರ್ಣ ಆನಂದ ಬೇಕಾದರೆ ಭಗವಂತನ ಮೊರೆ ಹೋಗಬೇಕು, ಆ ದಿಶೆಯಲ್ಲಿ ಪ್ರಯತ್ನ ಮಾಡಬೇಕು ಎಂದರು. ಹಾಗೆಯೇ ನಾವು ನಮ್ಮ ಪಾಲಿಗೆ ಬಂದಿರುವುದನ್ನ ಮನಸಾರೆ ಸ್ವೀಕರಿಸಿ ಆನಂದ ಪಡಬೇಕು ಎಂದು ಶ್ರೀ ಗಳು ನುಡಿದರು. ಪ್ರಾರಂಭದಲ್ಲಿ ಶ್ರೀಗಳವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಪಾದ ಪೂಜೆ ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀಮತಿ ವರ್ಷಾ ರೇವಣಕರ್ ಹಾಗೂ ಸುನೀತಾ ಜನ್ನು ಪ್ರಾರ್ಥನೆ ಮಾಡಿದರು. ಶ್ರೀಮತಿ ವಿನೋದಾ ವಿನಾಯಕ ಶೇಟ್ ಸ್ವಾಗತ ಕೋರಿದರು. ವಿನಾಯಕ ಪಾಂಡುರಂಗ ಶೇಟ್ ಹಾಗೂ ಕಾಶೀನಾಥ್ ಪಾಂಡುರಂಗ ಶೇಟ್ ದಂಪತಿಗಳು ಮತ್ತು ಸುವರ್ಣ ಕಲಾಕಾರರ ಸಂಘದ ಅಧ್ಯಕ್ಷರು ಪ್ರಭಾಕರ ವಿ. ವೇರ್ಣೇಕರ ಫಲ ಸಮರ್ಪಣೆ ಮಾಡಿದರು.ಉದಯಕುಮಾರ ಕಾನಳ್ಳಿ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು. ಕಾನಸೂರು ಆಂಜನೇಯ ದೇವಸ್ಥಾನದ ಸಾದ್ವಿ ಶ್ರೀಮತಿ ಸಾವಿತ್ರಮ್ಮ,ಶ್ರೀ ಮಠದ ಟ್ರಷ್ಟಿಗಳಾದ ಗಣಪತಿ ಕಾಗೇರಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.