ಹೊನ್ನಾವರ: ತಾಲೂಕಿನ ಶ್ರೀ ದುರ್ಗಾ ಮಹಿಳಾ ಮಂಡಲದ ದಶಮಾನೋತ್ಸವ ಕಾರ್ಯಕ್ರಮ ದಿಬ್ಬಣಗಲ್‌ನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಶ್ರೀ ವೀರ ವಿಠ್ಠಲ ದೇವಸ್ಥಾನದ ಅರ್ಚಕರಾದ ವರದರಾಜ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ತನ್ನದೆ ಆದ ವಿಶಿಷ್ಟ ಸ್ಥಾನಮಾನ, ಗೌರವವಿದೆ. ಇಲ್ಲಿನ ಮಹಿಳಾ ಮಂಡಳದ ಸದಸ್ಯರು ತಮ್ಮ ಸಾಮಾಜಿಕ ಕಾರ್ಯದ ಮೂಲಕ ಗ್ರಾಮದ ಅಭಿವೃದ್ಧಿ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿಗೆ ಮಾದರಿ ಮಹಿಳಾ ಸಂಘವಾಗಿ ಹೊರಹೊಮ್ಮಿದು ಎಲ್ಲರಿಗೂ ಹೆಮ್ಮೆ ತರುವಂತ ವಿಷಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಧರ ನಾಯಕ್ ಕೂಜಳ್ಳಿ ಮಾತನಾಡಿ ಪುಟ್ಟದಾದ ಹಳ್ಳಿಯಲ್ಲಿ ಇಷ್ಟೊಂದು ದೊಡ್ಡದಾದ ಕಾರ್ಯಕ್ರಮ ಆಯೋಜಿಸಿ ಊರಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದ್ದು ಎಲ್ಲರಿಗೂ ಮಾದರಿ . ಈ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ವಿನಾಯಕ ನಾಯ್ಕ ಮೂಡ್ಕಣಿ ಮಾತನಾಡಿ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಸಮುದಾಯದ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಹತ್ತು ವರ್ಷ ನಿರಂತರ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿನಲ್ಲಿ ಅತ್ಯಂತ ಕ್ರಿಯಾಶೀಲ ಮಹಿಳಾ ಮಂಡಳವಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ,ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲೂ ನಿಮ್ಮ ಸಂಘ ಗುರುತಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಕ್ಷಕಿ ಶ್ರೀಮತಿ ಶಾರದ ಎಸ್ ನಾಯ್ಕ ಮಾತನಾಡಿ ಈ ಒಂದು ಮಹಿಳಾ ಮಂಡಲಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ. ನಿಮ್ಮ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ನಂದಿತಾ ಎನ್ ಭಟ್ ಪ್ರಾಸ್ತಾವಿಕ ಮಾತನಾಡಿ ೧೦ ವರ್ಷಗಳಿಂದ ನಡೆದು ಬಂದ ಕಾರ್ಯ ಚಟುವಟಿಕೆ ವಿವರಿಸಿದರು. ವೇದಿಕೆಯಲ್ಲಿ ಎಸ್.ಎಸ್ ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ರಾಜ್ಯ ಹಾಗೂ ಜಿಲ್ಲಾ
ಪುರಸ್ಕೃತರಿಗೆ ಸನ್ಮಾನಿಸಲಾಯಿತು. ಸ್ಥಳೀಯ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಮಂಡಳದ ಕಾರ್ಯದರ್ಶಿಯಾದ ಮಮತಾ ಮೆಸ್ತಾ ಸ್ವಾಗತಿಸಿದರು ದತ್ತಾತ್ರೇಯ ಮೆಸ್ತಾ ಹಾಗೂ ದೀಪಾ ನಾಯ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಹಾಗೂ ಮಹಿಳೆಯರ ಮನರಂಜನೆ ಕಾರ್ಯಕ್ರಮ ಮತ್ತು ಹಳ್ಳಿ ಹೈದ ಪ್ಯಾಟೆಗ್ ಬಂದ ಖ್ಯಾತಿಯ ಶ್ರೀರಾಮ್ ಜಾದೂಗಾರ ಇವರಿಂದ ಜಾದು ಪ್ರದರ್ಶನ ನಡೆಯಿತು.