Slide
Slide
Slide
previous arrow
next arrow

ಗ್ರಾಸಿಂನಲ್ಲಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ: ಸಚಿವ ವೈದ್ಯ

300x250 AD

ಕಾರವಾರ: ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರಿಸ್ ಲಿಮಿಟೆಡ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸೇಫ್ಟಿ ಆಡಿಟ್ ವರದಿ ಬಂದ ನಂತರ ಕೈಗಾರಿಕೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ನಿರ್ದೇಶನ ನೀಡಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ ಮತ್ತು ಗ್ರಾಸಿಂ ಆಡಳಿತ ಮಂಡಳಿ ಮತ್ತು ಕಾರ್ಮಿಕ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನವರಿ 11 ರಂದು ಬಿಣಗಾದ ಗ್ರಾಸಿಂ ಇಂಡಸ್ಟ್ರಿಸ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥರಾಗಿದ್ದು, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ಅಧಿಕಾರಿಗಳು ತನಿಖೆ ಮಾಡಿ, ಸುರಕ್ಷತಾ ಆಡಿಟ್ ವರದಿ ನೀಡುವವರೆಗೆ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಖಚಿತಪಡಿಸಿಕೊಂಡು, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ವರದಿ ಪಡೆದು ಪುನ: ಕೈಗಾರಿಕೆಯನ್ನು ಆರಂಭಿಸಲು ಅನುಮತಿ ನೀಡುವಂತೆ ತಿಳಿಸಿದರು.
ಗ್ರಾಸಿಂ ಇಂಡಸ್ಟ್ರಿಸ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯ ಕುರಿತು ವಿವರಿಸಿದ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ಅಧಿಕಾರಿಗಳು, ಕೈಗಾರಿಕೆಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾದ ಕಾರಣ, ಈ ಸಂದರ್ಭದಲ್ಲಿ ಸ್ವಯಂ ಚಾಲಿತವಾಗಬೇಕಿದ್ದ ಯುಪಿಎಸ್‌ಗಳು ಆನ್ ಆಗದ ಕಾರಣ ಕ್ಲೋರಿನ್ ಸೋರಿಕೆ ಸಂಭವಿಸಿದ್ದು, ಪ್ರಸ್ತುತ ಕೈಗಾರಿಕೆಯಲ್ಲಿ ಸೆಲ್ಫ್ ಪವರ್ ಡಿಜಿ ಅಳವಡಿಸಿದ್ದು, ಆಟೋ ಸ್ವಿಚ್ ಆನ್ ವ್ಯವಸ್ಥೆ ಹಾಗೂ ಕ್ಲೋರಿನ್ ಸೋರಿಕೆ ನಿಯಂತ್ರಣ ತಪ್ಪಿಸಲು ಕ್ಯಾಸ್ಟಿಕ್ ಸೋಡಾ ಟ್ಯಾಂಕ್ ಅಳವಡಿಕೆ ಸೇರಿದಂತೆ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು.
ಕೈಗಾರಿಕೆಯಲ್ಲಿ ಸುರಕ್ಷತಾ ಉಪಕರಣಗಳನ್ನು ನಿರ್ವಹಿಸುವ ಸ್ಥಳದಲ್ಲಿ ಹೆಚ್ಚುವರಿ ಕಾರ್ಮಿಕರನ್ನು ನಿಯೊಜಿಸುವಂತೆ ಮತ್ತು ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದ ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಕಾರವಾರ ಅಂಕೋಲಾ ಕ್ಷೇತ್ರದ ಸತೀಶ್ ಸೈಲ್, ಕಾರ್ಮಿಕರು ಮತ್ತು ಕಂಪನಿಯ ಅಧಿಕಾರಿಗಳು ಒಂದು ಕುಟುಂಬದಂತೆ ಕಾರ್ಯನಿರ್ವಹಿಸಬೇಕು, ಕೈಗಾರಿಕೆ ಸ್ಥಗಿತಗೊಂಡ ಅವಧಿಯಲ್ಲಿನ ಕಾರ್ಮಿಕರ ವೇತನವನ್ನು ಕಡಿತಗೊಳಿಸದೇ ಫೆಬ್ರವರಿ 7 ರ ಒಳಗೆ ಪಾವತಿ ಮಾಡುವಂತೆ ಗ್ರಾಸಿಂ ಅಧಿಕಾರಿಗಳಿಗೆ ತಿಳಿಸಿದರು.
ಕೈಗಾರಿಕೆಯನ್ನು ಆರಂಭಿಸುವ ಕುರಿತಂತೆ, ಕೈಗಾರಿಕೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಪುನರಾರಂಭಿಸುವ ಬಗ್ಗೆ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ಅಧಿಕಾರಿಗಳು ಲಿಖಿತವಾಗಿ ನಿರಾಕ್ಷೇಪಣಾ ಪತ್ರ ನೀಡಬೇಕು, ಕೈಗಾರಿಕೆಯಲ್ಲಿ ಈ ರೀತಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗ್ರಾಸಿಂ ಅಧಿಕಾರಿಗಳು ಪ್ರತ್ಯೇಕ ಎಸ್.ಓ.ಪಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.

300x250 AD

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಡಿ ಉಳ್ವೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ, ಗ್ರಾಸಿಂ ಕೈಗಾರಿಕೆಯ ಅಧಿಕಾರಿಗಳು, ನೌಕರರ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top