ಸಿದ್ದಾಪುರ: ಜಗತ್ತಿನ ಎಲ್ಲೆಡೆ ಮಾನ್ಯತೆ ದೊರೆತರೂ ಹುಟ್ಟಿದ ಊರಿನಲ್ಲಿ ದೊರೆಯುವ ಮಾನ್ಯತೆಗೆ ಬೆಲೆ ಹೆಚ್ಚು ಎಂದು ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಹೇಳಿದರು.
ತಾಲ್ಲೂಕಿನ ಭುವನಾಗಿರಿಯ ಭುವನೇಶ್ವರಿ ದೇವಾಲಯದಲ್ಲಿ ನಡೆದ ಭುವನೇಶ್ವರಿ ಸಂಗೀತ ಮಹೋತ್ಸವ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾನುವಾರ ಅವರು ಮಾತನಾಡಿದರು.
ಗ್ರಾಮೀಣ ಪರಿಸರದಲ್ಲಿ ಪ್ರತಿ ವರ್ಷವೂ ಉತ್ತಮ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಪತ್ರಕರ್ತರ ಬರವಣಿಗೆಗೆ ಓದುಗರು ಸ್ಪಂದಿಸಬೇಕು. ಆಗ ಮಾತ್ರ ಪತ್ರಕರ್ತರಿಗೆ ಬರೆಯಲು ಪ್ರೇರಣೆ ದೊರೆಯುತ್ತದೆ. ಪತ್ರಕರ್ತರ ಬರವಣಿಗೆಯಲ್ಲಿ ವ್ಯಕ್ತಿಯ ತೇಜೋವಧೆ ಮತ್ತು ಅತಿಯಾದ ಹೊಗಳುವಿಕೆ ಕೂಡ ಒಳ್ಳೆಯದಲ್ಲ. ಪತ್ರಕರ್ತರು ಎಡಪಂಥಕ್ಕೂ ಸೇರದೇ ಬಲಪಂಥಕ್ಕೂ ಸೇರದೇ ಘಟನೆಯನ್ನು ಪರಾಮರ್ಶಿಸಿ ಸತ್ಯವನ್ನು ಜನತೆಗೆ ನೀಡುವ ಕೆಲಸ ಮಾಡಬೇಕು ಎಂದರು.
ಭುವನಗಿರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ, ದೀಪಾ ರವೀಂದ್ರ ಭಟ್ಟ ಐನಕೈ ಮತ್ತು ಸಿದ್ದಾಪುರದ ನಿವೇದಿತಾ ಮಹಿಳಾ ಮಂಡಳಿ ಅಧ್ಯಕ್ಷೆ ಗಾಯತ್ರಿ ವೆಂಕಟ್ರಮಣ ಭಟ್ಟ ಕೊಳಗಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿ.ಕೆ.ಭಟ್ಟ ಕಶಿಗೆ ಮತ್ತು ಗಣಪತಿ ಹೆಗಡೆ ಗುಂಜಗೋಡು ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಸ್ವೀಕರಿಸಿದ ರವೀಂದ್ರ ಭಟ್ಟ ಮಾತನಾಡಿದರು. ಜಿ.ಕೆ.ಭಟ್ಟ ಕಶಿಗೆ ಮತ್ತು ಗಣಪತಿ ಹೆಗಡೆ ಗುಂಜಗೋಡು ಸನ್ಮಾನ ಪತ್ರ ವಾಚಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ರವೀಂದ್ರ ಭಟ್ಟ ಐನಕೈ ನಾವೆಲ್ಲ ಇಲ್ಲವುಗಳ ಕುರಿತು ಯೋಚಿಸುತ್ತೇವೆ. ವಿಕಲ ಚೇತನರು ಇರುವುದರ ಬಗ್ಗೆಯಷ್ಟೇ ಯೋಚಿಸುತ್ತಾರೆ. ಕೈಯಿಲ್ಲ, ಕಾಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡವರಿಲ್ಲ.ನಾವು ಮನಸ್ಸು ಮಾಡಿದರೆ ಯಾವ ವಿಕಲ ಚೇತನನನ್ನೂ ಸಾಧನೆಯ ದಾರಿಗೆ ಹಚ್ಚಬಹುದು ಎಂದರು. ನಾನು ಮೂರನೇ ಕಿವಿ ಬರೆದಿದ್ದು ನಮ್ಮ ಸಾಧನೆ ಹೇಳಲಲ್ಲ. ಸತತ ಪ್ರಯತ್ನದಿಂದ ಏನನ್ನೂ ಸಾಧನೆ ಮಾಡಬಹುದು ಎಂದು ತಿಳಿಹೇಳಲು ಎಂದ ಅವರು ರಾಜ ಭವನದಿಂದ ಹಿಡಿದು ನೂರಾರು ಕಡೆ ಸನ್ಮಾನ ಸಂದಿದೆ. ಆದರೆ ಇಂದು ನೀಡಿದ ಸನ್ಮಾನ ತವರಿನ ಸನ್ಮಾನವಾಗಿದ್ದು ಈ ಸನ್ಮಾನ ಉಳಿದೆಲ್ಲಾ ಸನ್ಮಾನಕ್ಕಿಂತ ಒಂದು ಗುಂಜಿ ಮೇಲು ಎಂದರು. ಮತ್ತೋರ್ವ ಸನ್ಮಾನಿತರಾದ ದೀಪಾ ಭಟ್ಟ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ತಮ್ಮ ಸಾಧನೆಯ ಚಿತ್ರಣ ನೀಡಿದರು.
ನಾಣಿಕಟ್ಟಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಅಭಿನಂದನಾ ನುಡಿಗಳನ್ನಾಡಿದರು.
ಸಭೆಯಲ್ಲಿ ವಕೀಲರಾದ ರವಿ ಹೆಗಡೆ ಹೂವಿನಮನೆ, ವಿ.ಎಂ. ಭಟ್ಟ ಕೊಳಗಿ, ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೇಮನೆ ಇದ್ದರು.
ಗಣಪತಿ ಹೆಗಡೆ ಗುಂಜಗೋಡು ಸ್ವಾಗತಿಸಿದರು. ಪ್ರಶಾಂತ ಹೆಗಡೆ ಕಾಶೀಗದ್ದೆ ನಿರೂಪಿಸಿದರು. ನಂತರ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.