ಹೊನ್ನಾವರ : ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸದ ಒತ್ತಡದ ನಡುವೆ ಕ್ರೀಡೆ ಹಾಗೂ ಮನೊರಂಜನೆಗೆ ತಮ್ಮ ಬಿಡುವಿನ ಅವಧಿಯನ್ನು ಮೀಸಲಾಗಿಟ್ಟು, ದೈಹಿಕವಾಗಿ ಮಾನಸಿಕವಾಗಿ ಸದೃಡವಾಗಲು ಕಾರ್ಯಕ್ರಮ ಸಂಘಟಿಸಿರುವುದು ಉತ್ತಮ ಕಾರ್ಯ ಎಂದು ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಜನವರಿ 12 ರಿಂದ 14ರವರೆಗೆ ಸಂತೆಗುಳಿ ಮಹಾಸತಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಇ.ಪಿಎಲ್. ಸಂಘಟನಾ ಸಮಿತಿ ಹೊನ್ನಾವರ ಇವರ ವತಿಯಿಂದ ಸರ್ಕಾರಿ ನೌಕರರ ಪರಿವಾರದ ಕ್ರಿಕೇಟ್ ಪಂದ್ಯಾವಳಿ, ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂರು ದಿನಗಳ ಕಾಲ ಸಂಕ್ರಾತಿ ಹಬ್ಬದ ಸಮಯದಲ್ಲಿ ತಾಲೂಕಿನ ಸರ್ಕಾರಿ ಇಲಾಖೆಯವರು ಒಗ್ಗೂಡಿ ಕ್ರೀಡೆಯ ಜೊತೆ ಮನೊರಂಜನೆಯ ರಸದೌತಣ ಸಂತೆಗುಳಿ ಭಾಗದಲ್ಲಿ ಮೂಡಿಸಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳು ಸಮ್ಮಿಲನದಿಂದ ಕಾಲ ಕಳೆಯುದರಿಂದ ಪರಸ್ಪರ ಪರಿಚಯದ ಜೊತೆ ಹೊಂದಾಣಿಕೆ ಮೂಡಲಿದೆ. ಮಹಿಳೆಯರಿಗೆ ಪ್ರಥಮ ಬಾರಿಗೆ ಥ್ರೋಬಾಲ್ ಆಯೋಜನೆಯಿಂದ ಅವರಿಗೆ ಸಂತಸ ಮೂಡಿದೆ ಎಂದರು.
ಹೊಸಾಕುಳಿ ಗ್ರಾ.ಪಂ.ಅಧ್ಯಕ್ಷ ಸುರೇಶ ಶೆಟ್ಟಿ, ಸಂಘಟನೆಯ ಅಧ್ಯಕ್ಷ ಅಣ್ಣಪ್ಪ ಮುಕ್ರಿ, ನಿಕಟಪೂರ್ವ ಅಧ್ಯಕ್ಷ ರಾಜಕುಮಾರ ನಾಯ್ಕ, ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಇದ್ದರು.