ಕಾರವಾರ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಬಹಳ ಮುಖ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಒಂಬುಡ್ಸಮನ್ ಡಾ. ಬಾಲು ಕೆಂಚಪ್ಪ ತಿಳಿಸಿದರು.
ಅವರು ಶನಿವಾರ ಕಾರವಾರ ನಗರದ ಸಾಗರ ದರ್ಶನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ, ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ಗ್ರಾಹಕರ ಅನುಕೂಲಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ನಂಬಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳುವಳಿಕೆ ನೀಡುವುದು ಒಂಬಡ್ಸ್ ಮನ್ ನ ಜವಾಬ್ದಾರಿ, ಆರ್ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ತೊಂದರೆ ಕಂಡು ಬಂದಾಗ ಕೋರ್ಟ್ ಗೆ ಹೋಗುವ ಬದಲು ಆರ್ಬಿಐನ ಒಂಬಡ್ಸ್ಮನ್ ಗೆ ದೂರು ನೀಡಿದ್ದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರು.
ಬ್ಯಾಂಕಿನ ಅಂತರಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆಯ ಬಗ್ಗೆಯು ವಿವರಿಸಿದ ಅವರು, ಬ್ಯಾಂಕ್ಗಳು ದೂರು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಉತ್ತರವನ್ನು ದೂರುದಾರರಿಗೆ ತಿಳಿಸಬೇಕು. ಗ್ರಾಹಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರಿನ ನಮೂನೆಯನ್ನು ಬ್ಯಾಂಕಿನ ವೆಬ್ ಸೈಟ್ ಮುಖಪುಟದಲ್ಲಿ ಒದಗಿಸಬೇಕು. ಬ್ಯಾಂಕಿನ ಶಾಖೆಯಲ್ಲಿಯು ಸಹ ದೂರು ಕೊಡುವ ಸೌಲಭ್ಯವಿರುತ್ತದೆ. ಗ್ರಾಹಕ ಸೇವೆಯ ಕುರಿತು ಆರ್ಬಿಐ ಮಾಸ್ಟರ್ ಸುತ್ತೋಲೆಯ( Master Circular on Customer Service in Banks ) ಬಗ್ಗೆ ವಿವರಣೆ ನೀಡಿದರು.
ಆರ್ಬಿಐ ಒಂಬಡ್ಸ್ ಮನ್ ಯೋಜನೆ 2021ರ ಅಡಿ ಯಲ್ಲಿ ಇರುವ ಪರಿಹಾರ ವಿಧಾನ ಹಾಗೂ ದೂರುಗಳನ್ನು ಆರ್ ಬಿಐ ಪೋರ್ಟಲ್ ಹಾಗೂ ಇತರ ಮಾಧ್ಯಮದ ಮೂಲಕ ಹೇಗೆ ಸಲ್ಲಿಸಬೇಕು. ಹಲವು ವಿಧವಾದ ವಂಚನೆಗಳ ಬಗ್ಗೆ ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ತಿಳಿಸಿದರು.
ಈಗ ಗ್ರಾಹಕರಿಗಾಗಿ ಪ್ರತಿ ಯೊಂದು ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್ಗೊಳಿಸಿ ಅವರ ಕೈಯಲ್ಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಡಿಜಿಟಲ್ ವಹಿವಾಟು ಸುರಕ್ಷಿತ ಎಂಬ ಧೈರ್ಯ ಮೂಡಿ ಸುವ ಸಲುವಾಗಿ ಈ ಬ್ಯಾಂಕಿಂಗ್ ಓಂಬಡ್ಸ್ ಮನ್ ಕಾರ್ಯಕ್ರಮ ಆಯೋಜಿಸಿದ್ದು, ಗ್ರಾಹಕರ ಪ್ರತಿಯೊಂದು ರೂಪಾಯಿಯು ವ್ಯತ್ಯಾಸವಾಗದಂತೆ ಸುರಕ್ಷಿ ತವಾಗಿ ಇಡುವುದು ಬ್ಯಾಂಕಿಂಗ್ನ ಉದ್ದೇಶ ಗ್ರಾಹಕರು ಜಾಗೃತರಾದಾಗ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗಳು ಸುಲಭ ಎಂದರು.
ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಒಂಬಡ್ಸ್ಮನ್ ಯೋಜನೆ 2021ಗೆ ಸಂಬಂಧಿಸಿದಂತಹ ಕರಪತ್ರ ಹಾಗೂ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ಒಂಬಡ್ಸ್ ಮನ್ ನಿಧಿ ಅಗರ್ವಾಲ್, ಕೆನರಾ ಬ್ಯಾಂಕ್ ಉಪ ಜನರಲ್ ಮ್ಯಾನೇಜರ್ ರಾಜೀವ್ ತುಕ್ರಾಲ್ ಮತ್ತು ಎನ್ ಬಿಐ ಉಪ ಜನರಲ್ ಮ್ಯಾನೇಜರ್ ಎಲ್ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಸುಮಾರು 1000 ಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಸಿದ್ದರು ಹಾಗೂ ಪ್ರಶೋತ್ತರ ಅವಧಿಯನ್ನು ಏರ್ಪಡಿಸಲಾಗಿತ್ತು, ಸಭಿಕರ ಪ್ರಶ್ನೆಗಳಿಗೆ ಆರ್ ಬಿ ಐ ನ ಬ್ಯಾಂಕಿಂಗ್ ಒಂಬಡ್ಸ್ಮನ್ ರವರು ಹಾಗೂ ಇತರ ಬ್ಯಾಂಕುಗಳ ವತಿಯಿಂದ ಆಗಮಿಸಿದ್ದ ಅಧಿಕಾರಿಗಳು ಉತ್ತರಿಸಿದರು.