ಭಟ್ಕಳ: ಜಿಲ್ಲೆಯ ಪ್ರವಾಸದಲ್ಲಿರುವ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಭಟ್ಕಳದ ಕಡವಿನಕಟ್ಟೆ ಡ್ಯಾಂ ಗೆ ಭೇಟಿ ಪರಿಶೀಲನೆ ನಡೆಸಿದರು.
ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಜನರು ಕುಡಿಯುವ ನೀರಿಗಾಗಿ ಕಡವಿನಕಟ್ಟಾ ನೀರನ್ನು ಅವಲಂಬಿತರಾಗಿದ್ದಾರೆ. ಅದಲ್ಲದೆ ಶಿರಾಲಿ, ಬೆಂಗ್ರೆ ಪಂಚಾಯತ್ ವ್ಯಾಪ್ತಿಯ ಸಾವಿರಾರು ಎಕರೆಗಳಿಗೆ ನೀರಾವರಿ ಸೌಲಭ್ಯಕ್ಕೆ ಈ ಡ್ಯಾಮ್ ಅವಶ್ಯಕವಾಗಿರುತ್ತದೆ. ಇಲ್ಲಿ ತುಂಬಿರುವ ಹೂಳಿನಿಂದ ಅನೇಕ ಸಮಸ್ಯೆಗಳು ಉಂಟಾಗಿದ್ದು, ಹೂಳೆತ್ತುವ ಕಾಮಗಾರಿ ಕುರಿತು ಸಚಿವ ಮಂಕಾಳ್ ವೈದ್ಯ ನೀರಾವರಿ ಸಚಿವರೊಂದಿಗೆ ಚರ್ಚೆಸಿ ಶೀಘ್ರವೇ ಕಾಮಗಾರಿಯ ಅಂದಾಜು ಪಟ್ಟಿಯನ್ನು ರಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದರು.
ಇದಕ್ಕೂ ಪೂರ್ವದಲ್ಲಿ ಕಡವಿನಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು. ಬಳಿಕ ವಿಶ್ವ ಪ್ರಸಿದ್ಧ ಮುರುಡೇಶ್ವರ ಶಿವನ ದೇವಾಲಯಕ್ಕೂ ತೆರಳಿ ದೇವರ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು