ಸಿದ್ದಾಪುರ: ಹಿಂದಿನ ಕಾಲದಲ್ಲಿ ಒಂದು ಸಂಘವನ್ನು ಕಟ್ಟಿದಷ್ಟು ಸುಲಭವಾಗಿ ಇಂದಿನ ಕಾಲದಲ್ಲಿ ಸುಲಭವಲ್ಲ. ಕಟ್ಟಿದ ಸಂಸ್ಥೆಯನ್ನೇ ಉಳಿಸಿ, ಬೆಳೆಸಿಕೊಂಡು ಹೋಗುವುದು ಕಷ್ಟವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಾಗಿರುವ ಜೊತೆ ಆತಂಕವೂ ಹೆಚ್ಚಿದೆ. ಕಲುಷಿತವಾದ ವಾತಾವರಣ, ಬದಲಾದ ಮನಸ್ಥಿತಿಯಿಂದ, ಸರಿಯಾದ ಮಾರ್ಗದರ್ಶನವಿಲ್ಲದೇ ಸಂಸ್ಥೆಯ ಉಳಿಯುವಿಕೆ ಕಷ್ಟಸಾಧ್ಯ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ಸಭಾಭವನದಲ್ಲಿ ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕೃಷಿ ಸೇರಿದಂತೆ ಪ್ರತಿಕ್ಷೇತ್ರಗಳೂ ಅನೇಕ ಸಮಸ್ಯೆಯ ಸುಳಿಯಲ್ಲಿದೆ. ಅವೆಲ್ಲದರ ಬಗ್ಗೆ ಇಂದಿನ ಯುವಸಮೂಹ ಹಾಗೂ ಜನತೆ ಜಾಗೃತೆ ವಹಿಸಿ ಸರಿದಾರಿಗೆ ತರಬೇಕು. ಯುವಕ ಸಂಘಗಳು ಸಂಸ್ಕೃತಿ, ಸಾಹಿತ್ಯಿಕ ಬೆಳವಣಿಗೆಗೆ ಕಾರಣವಾಗುತ್ತಿರುವುದರ ಜತೆಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ ವಿವಿಧ ಮನಸ್ಥಿತಿಗಳ ನಡುವೆ ಮನಸ್ಸನ್ನು ಮತ್ತಷ್ಟು ಒಗ್ಗೂಡಿಸಿಕೊಂಡು ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.
ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ಅಧ್ಯಕ್ಷತೆವಹಿಸಿದ್ದರು. ವಿ. ಚಂದ್ರಶೇಖರ ಭಟ್ಟ ಗಾಳಿಮನೆ, ತಾಪಂ ಮಾಜಿ ಅಧ್ಯಕ್ಷ ಸುಧೀರ್ ಬಿ.ಗೌಡರ್, ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೇಸರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಊರಿನ ಹಿರಿಯರನ್ನು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೀತಾರಾಮ ಹೆಗಡೆ ಸುಳಗಾರ ಸ್ವಾಗತಿಸಿದರು. ಸಂಜಯ ಹೆಗಡೆ ಹುಲಿಮನೆ, ವಿನಾಯಕ ಹೆಗಡೆ ಪೇಟೇಸರ, ಶ್ರೀಪಾದ ಹೆಗಡೆ ಕಲ್ಮನೆ ಕಾರ್ಯಕ್ರಮ ನಿರ್ವಹಿಸಿದರು.
ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಡೊಳ್ಳಿನ ಕುಣಿತ, ನಂತರ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಕ್ರವ್ಯೂಹ ಮತ್ತು ಕಾರ್ತವೀರ್ಯಾರ್ಜುನ ಯಕ್ಷಗಾನ ಪ್ರದರ್ಶನಗೊಂಡಿತು.