ಅಂಕೋಲಾ: ಅಂಕೊಳಾ ತಾಲೂಕಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗಣಕಯಂತ್ರದ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ಜನ್ಮದಿನದ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ದಿನಾಚರಣೆ ಹಾಗೂ ಉತ್ತಮ ಆಡಳಿತ ದಿನವನ್ನು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಮ್. ಉದ್ಘಾಟಿಸಿ, ಮಾತನಾಡಿದರು.
ಸರ್ಕಾರದ ಎಲ್ಲ ಯೋಜನೆಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಮಾಹಿತಿ ವಿನಿಮಯ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಫರೇಟರ್ ಗಳ ಕಾರ್ಯ ಅಭಿನಂದನಾರ್ಹ. ಸರ್ಕಾರದಲ್ಲಿ ಪಾರದರ್ಶಕತೆ, ಸಕಾಲದಲ್ಲಿ ಮತ್ತು ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಲು ಆಪರೇಟರ್ ನೆರವಾಗಿದ್ದಾರೆ. ಕಂಪ್ಯೂಟರ್ ನಿರ್ವಾಹಕರು ಆರಂಭದಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿ ಸೇವೆ ಸಲ್ಲಿಸಿದ್ದಾರೆ. ಕಾಲಕ್ರಮೇಣ ವೇತನದಲ್ಲಿ ಪರಿಷ್ಕರಣೆಯಾಗಿದೆ ಆದರೂ ಅವರ ಕೆಲಸದ ಸ್ವಭಾವ, ಒತ್ತಡ, ಪ್ರಮಾಣ ಹಾಗೂ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಗಣನೆಗೆ ತೆಗೆದುಕೊಂಡರೆ ಅವರ ವೇತನ ಇನ್ನೂ ಹೆಚ್ಚಾಗಬೇಕು. ಮುಂದಿನ ದಿನಗಳಲ್ಲಿಯೂ ಸರ್ಕಾರದ ಯೋಜನೆಗಳು ಶೀಘ್ರವಾಗಿ, ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಲಿ, ಎಲ್ಲರೂ ಉತ್ತಮವಾಗಿ ಕೆಲಸ ಮಾಡಲಿ ಎಂದರು.
ತಾಲೂಕು ಪಂಚಾಯತ್ ವ್ಯವಸ್ಥಾಪಕ ನೀಲಕಂಠ, ನಾಗರಾಜ್ ನಾಯ್ಕ ಸೇರಿದಂತೆ ತಾಲೂಕು ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ಎಲ್ಲ ಗ್ರಾಪಂಗಳ ಡಿಇಒ ಗಳು ಹಾಗೂ ತಾಪಂನ ಡಿಇಒಗಳು ಸಿಬ್ಬಂದಿ ಉಪಸ್ಥಿತರಿದ್ದರು.