ಹೊನ್ನಾವರ: ಪುರಾಣ ಪ್ರಸಿದ್ಧ ಹಾಗೂ ನಾಗಾರಾಧನೆಯ ಪುಣ್ಯ ತಾಣ ಎಂದೇ ಪ್ರಸಿದ್ಧಿ ಹೊಂದಿರುವ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾ ಷಷ್ಠಿಯ ನಿಮಿತ್ತ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಶನಿವಾರ ವಿಜೃಂಭಣೆಯಿಂದ ನೇರವೇರಿತು.
ಶ್ರೀ ಸುಬ್ರಹ್ಮಣ್ಯ ದೇವಾಲದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಂದ ಹಣ್ಣು-ಕಾಯಿ ಸೇವೆ, ಅರ್ಚನೆ, ಆರತಿ, ಅಭಿಷೇಕ, ಸರ್ವ ಸೇವೆ, ಅಪೂಪ ಸೇವೆ, ಪಂಚಖಾದ್ಯ ಸೇವೆ, ಲಾಡು ಪ್ರಸಾಸ ಸೇವೆ ಸೇರಿದಂತೆ ವಿವಿಧ ಸೇವೆಯನ್ನು ಸಲ್ಲಿಸಿದರು. ಸಮೀಪದ ನಾಗಬನದಲ್ಲಿರುವ ನಾಗ ದೇವರಿಗೆ ಕ್ಷೀರಾಭಿಷೇಕ, ಆರತಿ ಮತ್ತು ಫಲಾಭಿಷೇಕ ಸೇರಿದಂತೆ ವಿವಿಧ ಸೇವೆ ಸಲ್ಲಿಸಲಾಯಿತು. ಮುಂಜಾನೆ 6 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯುವುದಕ್ಕಾಗಿ ಪೆಂಡಾಲ್ ವ್ಯವಸ್ಥೆ, ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಶಾಸಕ ದಿನಕರ ಶೆಟ್ಟಿ, ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ನಾಡಿನ ಮೂಲೆಮೂಲೆಯಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಸಂಕಲ್ಪಿಸಿಕೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ದೇವಾಲಯದ ಟ್ರಸ್ಟ ಅಧ್ಯಕ್ಷ ಎಸ್.ಆರ್.ಹೆಗಡೆ ಮಾತನಾಡಿ ಪ್ರತಿ ಬಾರಿಯಂತೆ ಸಕಲ ಸಿದ್ದತೆಯೊಂದಿಗೆ ಅದ್ದೂರಿಯಾಗಿ ಚಂಪಾಷಷ್ಠಿ ಉತ್ಸವ ನಡೆಯುತ್ತಿದ್ದು, ವಿವಿಧ ಸೇವಾ ಕಾರ್ಯಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ಸೇವಾ ಕೌಂಟರ್ ತೆರೆದು ಮಾಹಿತಿ ನೀಡಲಾಗುತ್ತಿದೆ. ಪಾನಕ ಸೇವೆ, ಮಧ್ಯಾಹ್ನ 4 ಗಂಟೆ ನಂತರ ರಾತ್ರಿಯವರೆಗೂ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾ.ಪಂ. ಹಾಗೂ ತಾಲೂಕ ಆಡಳಿತ ಮತ್ತು ಪೊಲೀಸ್ ಇಲಾಖೆಯ ಜೊತೆಗೆ ವಿವಿಧ ಸಂಘಟನೆಯವರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.