ವರದಿ ತಿರಸ್ಕಾರ ಕುರಿತು ಸಂಸದರು ಧ್ವನಿ ಎತ್ತಲಿ: ರವೀಂದ್ರ ನಾಯ್ಕ
ಶಿರಸಿ: ರಾಜ್ಯ ಸರಕಾರದಿಂದ ಸಂಪೂರ್ಣ ತಿರಸ್ಕರಿಸಲ್ಪಟ್ಟ ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸಲು ಪಾರ್ಲಿಮೆಂಟ್‌ನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೇಂದು ರಾಜ್ಯದ ಸಂಸದರಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಅವರು ನ.25ರಂದು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ನ.21ರಂದು ಜರುಗಿದ “ಬೆಂಗಳೂರು ಚಲೋ” ಕಾರ್ಯಕ್ರಮದ ಫಲಶ್ರುತಿ ಕುರಿತು ಚರ್ಚಿಸುತ್ತಾ ಮೇಲಿನಂತೆ ಹೇಳಿದರು.
ಚಳಿಗಾಲದ ಸಂಸದ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಈಗಾಗಲೇ ಆರನೇ ಹಾಗೂ ಕೊನೆಯ ಭಾರಿ ವರದಿಯ ಅಂಶ ಪ್ರಕಟಿಸಿದ್ದು ಜನಸಾಮಾನ್ಯರಿಗೆ ಮಾರಕವಾಗಿರುವ ವರದಿ ವಿರುದ್ಧ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕೇಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಸಾಬ ಗೌಡಳ್ಳಿ, ನೆಹರು ನಾಯ್ಕ, ಚಂದ್ರು ಕಂಡ್ರಾಜಿ ಉಪಸ್ಥಿತರಿದ್ದರು.
10 ಜಿಲ್ಲೆಯಲ್ಲಿ ಸೂಕ್ಷ್ಮ ಪ್ರದೇಶ ಸೀಮಿತ:
ಕರ್ನಾಟಕದ 10 ಜಿಲ್ಲೆಯ 20668 ಚದರ ಕಿ.ಮೀ ವ್ಯಾಪ್ತಿಯ 1531 ಹಳ್ಳಿಗಳಲ್ಲಿ ಸೂಕ್ಷ್ಮ ಪ್ರದೇಶದ ಒಳಪಡಲಿದ್ದು, ಲೋಕಸಭಾ ಕ್ಷೇತ್ರದ ವರ್ಗೀಕರಣ ಹಿನ್ನಲೆಯಲ್ಲಿ 8 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಂಶೋಧರ ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶ ಒಳಪಡುತ್ತದೆ ಎಂದು ಅವರು ಹೇಳಿದರು.
ವಿರೋಧಕ್ಕೆ ಕಾರಣ:
- ಕಸ್ತೂರಿರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ.
- ಗ್ರಾಮದ ಶೇ.೨೦ ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ.
- ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಭಿಪ್ರಾಯ ಅಥವಾ ಭೌತಿಕ ಸರ್ವೇಮಾಡಿ ವಿಷಯ ಸಂಗ್ರಹ ಮಾಡಿದ್ದು ಇರುವುದಿಲ್ಲ.
- ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು, ನೀತಿ-ನಿಯಮ ಇರುವುದರಿಂದ ಹೊಸಮಾನದಂಡದ ಅವಶ್ಯಕತೆ ಇರುವುದಿಲ್ಲ.
- ಜಿಲ್ಲೆಯ ಅಭಿವೃದ್ಧಿ ದಿಶೆಯಲ್ಲಿ ಪರಿಸರ ಸೂಕ್ಷ್ಮ ಘೋಷಣೆಯಿಂದ ಅಭಿವೃದ್ಧಿಗೆ ಮಾರಕವಾಗುವುದು.
- ಉಪಗ್ರಹ ಆಧಾರಿತ ಸರ್ವೇ ಆಗಿರುವುದರಿಂದ ಅಡಿಕೆ, ತೆಂಗಿನ ತೋಟ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸರ್ಗಿಕ ವಿರೋಧವಾದ ಕ್ರಮ.
- ಘೋಷಿಸಿದ ಹಳ್ಳಿ(ಗ್ರಾಮದ) ನಿರ್ದಿಷ್ಟ ಸರ್ವೇ ನಂ ಪ್ರದೇಶ ವ್ಯಾಖ್ಯಾಯಿಸದೇ ಇರುವುದು ಅವೈಜ್ಞಾನಿಕ.
- ಘೋಷಿಸಿದ ಪ್ರದೇಶದಲ್ಲಿ ನೈಸರ್ಗಿಕ ಮತ್ತು ಮಾನವ ಮೂಲ ಸೌಕರ್ಯದ ಮೂಲಭೂತ ಹಕ್ಕುಗಳಾದ ನೀರು, ರಸ್ತೆ ಅಭಿವೃದ್ಧಿ ಮುಂತಾದ ಹಲವಾರು ಪಾರಂಪರಿಕ ನಾಗರಿಕತೆಯ ಸೌಕರ್ಯ ಅವನತಿಗೆ ಕಾರ್ಯ
- ನಿರ್ಬಂಧನದಿಂದ ಮಾನವ ಹಕ್ಕುಗಳ ಮತ್ತು ಜೀವನ ಹಕ್ಕು ಉಲ್ಲಂಘನೆ ಆಗುವುದು.