ಕಾರವಾರ: ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ನಮ್ಮ ದೇಶಕ್ಕೆ ದೊರೆತಿರುವ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರತವಾಗಿರುವ ಇವರ ಸೇವೆ ಅತ್ಯಂತ ಕಠಿಣದಿಂದ ಕೂಡಿದೆ. ಪೊಲೀಸರು ತಮ್ಮ ಕರ್ತವ್ಯದ ಮೂಲಕ ಸಮಾಜ್ಕಕೆ ಅತ್ಯಂತ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯ ಕುಮಾರ್ ಹೇಳಿದರು.
ಅವರು ಸೋಮವಾರ, ಪೊಲೀಸ್ ಕವಾಯತು ಮೈದಾನದಲ್ಲಿ, ಪೊಲೀಸ್ ಇಲಾಖೆ ವತಿಯಿಂದ ನಡೆದ ಪೊಲೀಸ್ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ , ಪೊಲೀಸ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಾರ್ವಜನಿಕರು ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಮೊದಲು ಪೊಲೀಸರ ಬಳಿ ತೆರಳುತ್ತಾರೆ ನಂತರ ನ್ಯಾಯಾಲಯಗಳಿಗೆ ಮೊರೆ ಹೋಗುತ್ತಾರೆ. ಸೇನಾಪಡೆಗಳು ಯುದ್ದಕಾಲದಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದರೆ ಪೊಲೀಸರು ದಿನನಿತ್ಯ ದೇಶದ ಆಂತರಿಕ ರಕ್ಷಣೆ ಮತ್ತು ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸೇವೆಯು ಎಲ್ಲರಿಗೂ ಮಾದರಿಯಾಗಿದೆ. ಸಂವಿಧಾನವು ಸಾರ್ವಜನಿಕರಿಗೆ ನೀಡಿರುವ ಹಕ್ಕುಗಳ ರಕ್ಷಣೆ ಮಾಡುವುದರಲ್ಲಿ ಕೂಡಾ ಪೊಲೀಸರ ಪಾತ್ರ ಮುಖ್ಯವಾಗಿದ್ದು, ಸಾರ್ವಜನಿಕರ ರಕ್ಷಣೆಗಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಪೊಲೀಸರ ಕರ್ತವ್ಯವು ಇತರೆ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಮಾದರಿಯಾಗುವುದರ ಜೊತೆಗೆ ಅವರ ಸಂಸ್ಮರಣೆ ನಿರಂತರವಾಗಿರಬೇಕು ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯು ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ, ಜಲಾಶಯಗಳು, ಸಮುದ್ರ ತೀರ, ಗಡಿಭಾಗ ಸೇರಿದಂತೆ ಅತ್ಯಂತ ಸೂಕ್ಷ್ಮ ಪ್ರದೇಶಗಳನ್ನು ಹೊಂದಿದ್ದು, ಇವುಗಳ ರಕ್ಷಣೆಯ ಜೊತೆಗೆ ಸಾರ್ವಜನಿಕರ ರಕ್ಷಣೆಯನ್ನೂ ಪೊಲೀಸ್ ಇಲಾಖೆ ಅತ್ಯಂತ ಜವಾಬ್ದಾರಿಯುತವಾಗಿ ಮಾಡುತ್ತಿದೆ. ಎಸ್.ಪಿ. ಕಚೇರಿಯಲ್ಲಿನ ಸೈಬರ್ ಸೆಕ್ಯುರಿಟ ವಿಭಾಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಸುಳ್ಳುಸುದ್ದಿಗಳ ಬಗ್ಗೆ 24*7 ತೀವ್ರ ನಿಗಾ ಇರಿಸಿದೆ. ವಿಪತ್ತು ನಿರ್ವಹಣಾ ಸಮಯದಲ್ಲಿ ಕೂಡಾ ಕಂದಾಯ ಇಲಾಖೆಯೊಂದಿಗೆ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದ ಅವರು, ಶಿರೂರು ಗುಡ್ಡ ಕುಸಿತ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಎಂ. ನಾರಾಯಣ ದೇಶದಲ್ಲಿ ಈ ವರ್ಷ ಕರ್ತವ್ಯದಲ್ಲಿ ಹುತಾತ್ಮರಾದ 213 ಪೊಲೀಸ್ ಸಿಬ್ಬಂದಿಗಳ ಹೆಸರುಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಸಿ.ಎಸ್.ಓ (ಎಫ್.ಓ.ಕೆ) ಕಮಾಡೋರ್ ಎ.ಕೆ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ, ಸಿ.ಓ(ಐ.ಸಿ.ಜಿ.ಎಸ್) ಕಮಾಂಡೆAಟ್ ಕಿರಣ್ ಕುಮಾರ ಸಿನ್ಹಾ, ಹೋಂ ಗಾರ್ಡ್ ಕಮಾಂಡೆAಟ್ ಸಂಜು ನಾಯ್ಕ್, ಸಿ.ಐ.ಎಸ್.ಎಫ್, ಆರ್.ಪಿ.ಎಫ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು.
ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು ಮತ್ತು ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.