ಶಿರಸಿ: ಅದಮ್ಯ ಚೇತನ ಸಂಸ್ಥೆ (ರಿ), ಬೆಂಗಳೂರು ಹಾಗೂ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಭೈರುಂಭೆ ಸಹಯೋಗದಲ್ಲಿ ಪ್ಲೇಟ್ ಬ್ಯಾಂಕ್ ಹಾಗೂ ಖಗೋಳ ವೀಕ್ಷಣಾ ತರಬೇತಿ ಘಟಕ ಉದ್ಘಾಟನಾ ಸಮಾರಂಭವನ್ನು ಇಂದು ಮುಂಜಾನೆ 10.15ರಿಂದ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ
ಘಟಕಗಳ ಉದ್ಘಾಟನೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ನಳ್ಳಿ ವಹಿಸಲಿದ್ದಾರೆ. ಅಭ್ಯಾಗತರಾಗಿ ಅದಮ್ಯ ಚೇತನ, ಬೆಂಗಳೂರು ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ, ಓಕ್ ಸಿಸ್ಟಮ್ಸ್ ಪ್ರೈ ಲಿ. ಬೆಂಗಳೂರು ಇದರ ನಿರ್ದೇಶಕ ಪ್ರದೀಪ ಓಕ್ ಆಗಮಿಸಲಿದ್ದಾರೆ.ವಜ್ರ ಮಹೋತ್ಸವ ಸಮಿತಿ, ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ, ಹುಳಗೋಳ ಕೃಷಿ ಪ್ರಾ.ಸ. ಸಂಘ ನಿ. ಭೈರುಂಬೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕೆಶಿನಮನೆ,ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಶಾ.ಶಿ.ಹಾಗೂ ಗ್ರಾ.ಅ.ಸಂಸ್ಥೆ,ಭೈರುಂಬೆ ಕಾರ್ಯದರ್ಶಿ ಎಂ.ವಿ.ಹೆಗಡೆ ಹುಳಗೋಳ, ಸಿಎ ಪವನಕುಮಾರ ಶರ್ಮ ಮೆಂಟರ್ ಫಾರ್ ಕಿಡ್ಸ್, ಬೆಂಗಳೂರು ಉಪಸ್ಥಿತರಿರಲಿದ್ದಾರೆ.
ಖಗೋಳ ವೀಕ್ಷಣಾ ಚಟುವಟಿಕೆಗಳ ಪರಿಚಯವನ್ನು ಆಗಸ್ 360 ಸಂಚಾಲಕ ವಿಭವ ಮಂಗಳೂರು ನಡೆಸಿಕೊಡಲಿದ್ದಾರೆ.
ಪ್ಲೇಟ್ ಬ್ಯಾಂಕ್ಗಳು
ನಾವು ವ್ಯಾಪಕವಾಗಿ ಬಳಸುತ್ತಿರುವ ಬಿಸಾಡಬಹುದಾದ ಪೇಪರ್ ಪ್ಲೇಟ್ಗಳಲ್ಲಿ ಹಾನಿಕಾರಕ ಮೈಕ್ರೋ-ಪ್ಲಾಸ್ಟಿಕ್ಗಳು ಇರುತ್ತವೆ. ಈ ಮೈಕ್ರೋ-ಪ್ಲಾಸ್ಟಿಕ್ಗಳಲ್ಲಿ ಇರುವ ಬಿಸ್ಫೆನಾಲ್, ಸ್ಟೈರೀನ್ ಆಕ್ಸೈಡ್, ಮುಂತಾದ ರಾಸಾಯನಿಕಗಳು ಆಹಾರಚಕ್ರದ ಮೂಲಕ ನಮ್ಮ ದೇಹವನ್ನು ಸೇರಿದಾಗ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುತ್ತವೆ ಮತ್ತು ಹೊರಗಡೆ ಎಸೆದಾಗ ದೀರ್ಘಕಾಲೀನ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹಾಗೂ ನಮ್ಮ ಮಕ್ಕಳಲ್ಲಿ ಮೈಕ್ರೋಪ್ಲಾಸ್ಟಿಕ್ನಲ್ಲಿ ಇರುವ ರಾಸಾಯನಿಕಗಳು ಶೇಖರಣೆ ಆಗುವುದನ್ನು ತಡೆಗಟ್ಟಲು ಪ್ಲೇಟ್ ಬ್ಯಾಂಕ್ ಒಂದು ವಿನೂತನ ಸಾಮುದಾಯಿಕ ಪ್ರಯತ್ನ. ಮದುವೆ, ಮುಂಜಿ, ಸಭೆ-ಸಮಾರಂಭಗಳಲ್ಲಿ ತಿಂದುಂಡು ಎಸೆಯುವ ಕಾಗದದ ತಟ್ಟೆ-ಲೋಟಗಳ ಬದಲು ತೊಳೆದು ಪುನಃ ಬಳಕೆ ಮಾಡಬಹುದಾದ ಸ್ಟೀಲ್ ಬಟ್ಟಲು-ಲೋಟಗಳನ್ನು ಉಚಿತವಾಗಿ ಪೂರೈಸುವ ಒಂದು ವ್ಯವಸ್ಥೆ ಈ ಪ್ಲೇಟ್ ಬ್ಯಾಂಕ್.
ಖಗೋಳ ವೀಕ್ಷಣೆ ಹಾಗೂ ಖಗೋಳ ಛಾಯಾಚಿತ್ರ ತರಬೇತಿ:
ನಮ್ಮ ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳು ಶುಭ್ರ ಆಕಾಶವನ್ನು ಅಳೆಯುವ ಬಾರ್ಟಲ್ ಮಾನದಂಡದಲ್ಲಿ 2ನೇ ಶ್ರೇಣಿಯಲ್ಲಿ ಇವೆ. ಆದ್ದರಿಂದ ಈ ಜಿಲ್ಲೆ ಆಕಾಶ ವೀಕ್ಷಣೆ ಮತ್ತು ಖಗೋಳ ಛಾಯಾಗ್ರಹಣಕ್ಕೆ ಹಾಗೂ ಆಕಾಶದ ಅದ್ಭುತಗಳನ್ನು ಅನ್ವೇಷಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಈ ತರಬೇತಿಯು ಮಕ್ಕಳಲ್ಲಿ ಕುತೂಹಲವನ್ನು ಹುಟ್ಟುಹಾಕುತ್ತದೆ, ಬಾಹ್ಯಾಕಾಶದ ವಿಶಾಲತೆ ಮತ್ತು ಅದರ ಹಿಂದಿನ ವಿಜ್ಞಾನವನ್ನು ಅವರಿಗೆ ಪರಿಚಯಿಸುತ್ತದೆ. ಪ್ರದೇಶದ ನೈಸರ್ಗಿಕ ತಾಣಗಳು ಖಗೋಳ ವೀಕ್ಷಣಾ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳನ್ನು ಹೊಂದಿದೆ. ಅದಲ್ಲದೇ ಮೂಲಭೂತ ವಿಜ್ಞಾನದ ಪರಿಕಲ್ಪನೆಗಳನ್ನು ಕಲಿಯಲು ಮತ್ತು ತೊಡಗಿಸಿಕೊಳ್ಳಲು ಯುವ ಮನಸ್ಸುಗಳಿಗೆ ಇದು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತದೆ ಹಾಗೂ ಮೂಲಭೂತ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ ಯುವಕರ ತಂಡವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.