Slide
Slide
Slide
previous arrow
next arrow

ಕಲಾರಸಿಕರ ಮೆಚ್ಚುಗೆಗೆ ಪಾತ್ರವಾದ ‘ನಾದ-ನೃತ್ಯೋಪಾಸನಂ’

300x250 AD

ಎರಡು ದಿನಗಳ ಅಭೂತಪೂರ್ವ ಕಾರ್ಯಕ್ರಮಕ್ಕೆ ತೆರೆ

ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ತ್ರಯಿ ಕಲಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ರಂಗಧಾಮದಲ್ಲಿ ಎರಡನೇ ದಿನದ ನಾದೋಪಾಸನಂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ವೇಳೆ ಉಪಸ್ಥಿತರಿದ್ದ ಪಂಡಿತ್ ಗಣಪತಿ ಭಟ್ ಹಾಸಣಗಿ ನಾದಾನುಸಂಧಾನಂ ಟ್ರಸ್ಟ್‌ನ ಕಲಾಸೇವೆಯ ಕುರಿತು ಮಾತನಾಡಿ, ಶಿರಸಿಯ ಕಲಾಭಿಮಾನಿಗಳು ಧಾರವಾಡದ ಕಲಾಸಕ್ತರಂತೆ ತುಂಬು ಆಸಕ್ತಯಿಂದ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರಲ್ಲದೆ ನಾದಾನುಸಂಧಾನಂ ಟ್ರಸ್ಟ್ ನ ಕಲಾಸೇವೆಗೆ ಕಲಾಭಿಮಾನಿಗಳು ಹೆಚ್ಚು ಹೆಚ್ಚು ಸಹಕಾರ ನೀಡುವುದರ ಮುಖೇನ ಹೆಚ್ಚು ಹೆಚ್ಚು ಕಲಾವಿದರನ್ನು ಬೆಳೆಸುವಲ್ಲಿ ಸಹಕರಿಸುವಂತೆ ಕರೆ ನೀಡಿದರು.

300x250 AD

ನಾದೋಪಾಸನಂ ಕಾರ್ಯಕ್ರಮದಡಿಯಲ್ಲಿ ಕುಮಾರ್ ಪೃಥ್ವಿರಾಜ್ ನಾರಾಯಣ ಕುಲಕರ್ಣಿಯ ಕೊಳಲು ವಾದನಕ್ಕೆ ಸಭಿಕರು ತಲೆದೂಗಿದರು.ಇವರಿಗೆ ನಾಗರಾಜ್ ಹೆಗಡೆ ಬೆಂಗಳೂರು ತಬಲಾ ಸಾಥ್ ನೀಡಿದರು. ನಂತರದಲ್ಲಿ ನಡೆದ ಮೇಧಾ ಭಟ್ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಚಕ್ರಧಾರ್ ರಾಗ ಕಲಾರಸಿಕರನ್ನು ರಾಗದಲೆಯಲ್ಲಿ ಮಿಂದೇಳುವಂತೆ ಮಾಡಿತು. ಮರಾಠಿ ಅಭಂಗ್ ಹಾಗೂ ಹಳೆಗನ್ನಡವನ್ನೊಳಗೊಂಡ ಭಕ್ತಿಗೀತೆಯು ಮೆಚ್ಚುಗೆಯನ್ನು ಗಳಿಸಿತು. ತದನಂತರ ಅಂತರರಾಷ್ಟ್ರೀಯ ಕಲಾವಿದರಾದ ಪಂಡಿತ್ ಶೌನಕ್ ಅಭಿಷೇಕಿ ಅವರ ಸುಮಧುರ ಗಾಯನಕ್ಕೆ ಸಂಗೀತಾಭಿಮಾನಿಗಳು ಕರತಾಡನದ ಮಳೆಗೈದರು. ಸಂವಾದಿನಿಯಲ್ಲಿ ಪಂಡಿತ್ ಸುಧಾಂಶು ಕುಲಕರ್ಣಿ ಹಾಗೂ ತಬಲಾದಲ್ಲಿ ಪಂಡಿತ್ ಉದಯ್ ಕುಲಕರ್ಣಿ ಸಹಕರಿಸಿದರು. ರಾಷ್ಟ್ರೀಯ, ಅಂತರಾಷ್ಟ್ರೀಯ ಕಲಾವಿದರನ್ನೊಳಗೊಂಡ ಎರಡು ದಿನದ ಕಾರ್ಯಕ್ರಮವನ್ನು ಆಸ್ವಾದಿಸುವ ಅವಕಾಶವನ್ನು ಕಲಾಪ್ರೇಮಿಗಳಿಗೆ ಒದಗಿಸಿದ ನಾದಾನುಸಂಧಾನಂ ಟ್ರಸ್ಟ್ ಎಲ್ಲಾ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಆರ್‌ಟಿಓ ಅಧಿಕಾರಿ ಜಿ.ಎಸ್.ಹೆಗಡೆ ಹಲಸರಿಗೆ, ಸಾಮಾಜಿಕ ಕಾರ್ಯಕರ್ತ ದೀಪಕ್ ಹೆಗಡೆ ದೊಡ್ಡೂರು, ರಾಗಮಿತ್ರ ಪ್ರತಿಷ್ಠಾನ ಟ್ರಸ್ಟ್‌ನ ಅಧ್ಯಕ್ಷ ವಿದ್ವಾನ್ ಪ್ರಕಾಶ್ ಹೆಗಡೆ ಯಡಳ್ಳಿ, ವಿದ್ವಾನ್ ಪ್ರವೀಣ ಭಟ್ಟ ಅಗ್ಗೆರೆ ಹಾಗೂ ಇನ್ನಿತರರು ಹಾಜರಿದ್ದರು. ವಿದ್ವಾನ್ ಮನೋಜ್ ಭಟ್ಟ ಹೋಬಳಿ ಸ್ವಾಗತಿಸಿದರು. ಶ್ರೀಮತಿ ರೂಪಾ ಹೆಗಡೆ ಹಾಗೂ ನಾರಾಯಣ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top