ಭಟ್ಕಳ: ಮನುಷ್ಯ ಮಾಡಿದ ತಪ್ಪನ್ನು ತಿದ್ದಿಕೊಂಡು ಮನುಕುಲವೆ ಸ್ಮರಿಸುವ ವ್ಯಕ್ತಿಯಾಗಬಹುದು ಎನ್ನುವದಕ್ಕೆ ಶ್ರೀ ಮಹರ್ಷಿ ವಾಲ್ಮಿಕಿ ಒಬ್ಬರು ಉತ್ತಮ ಉದಾಹರಣೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಗುರುವಾರ ಇಲ್ಲಿನ ಅರ್ಬನ ಬ್ಯಾಂಕ್ ಹಾಲ್ನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಭಟ್ಕಳ, ಪಟ್ಟಣ ಪಂಚಾಯಿತಿ ಜಾಲಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ. ತಾನು ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಕಾನನದ ಮಧ್ಯ ತೆರಳಿ ತಪಸ್ಸು ಮಾಡಿ ಹುತ್ತಗಳ ನಡುವೆ ಎದ್ದು ಬಂದು ವಾಲ್ಮೀಕಿ ಮಹರ್ಷಿಯಾದರು. ಋಷಿಯಾದರು. ಗೊತ್ತಿಲ್ಲದೆ ಮಾಡುವ ತಪ್ಪನ್ನು ಇಂತಹ ಮಹಾತ್ಮರ ನೆನಪು ಮಾಡಿಕೊಂಡು ಸರಿಪಡಿಸಿಕೊಂಡು ಮೊದಲು ಮಾನವನಾಗಬೇಕು. ಕಟುಕನ ಮನದಲ್ಲಿ ಪಾಪ ಪ್ರಜ್ಞೆ, ದೈವ ಪ್ರೀತಿ ಉದ್ಬವಿಸಿ ಬೇಡನಾಗಿದ್ದ ವ್ಯಕ್ತಿ ಋಷಿ ಆಗಿ, ಕವಿ ಆಗಿ ಬದಲಾವಣೆ ಆಗಿದ ಕಥೆ ರೋಚಕ ಎಂದು ಅವರು ಹೇಳಿದರು.
ಅವರ ಮಹತ್ಕಾರ್ಯ ಸ್ಮರಿಸಿ ಸರ್ಕಾರ ಪರಿಶಿಷ್ಟ ಪಂಗಡಗಳ ವಾಲ್ಮಿಕಿ ನಿಗಮ ಸ್ಥಾಪಿಸಿದೆ. ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಶಿಕ್ಷಣ ಸೌಲಭ್ಯ, ಪ.ಪಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಯುವ ಪೀಳಿಗೆಗೆ ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಮೈಕ್ರೋ ಕ್ರೆಡಿಟ್ ಯೋಜನೆಗಳ ಅನುಷ್ಠಾನ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಕಡೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಅವರು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಭಾಸ್ಕರ ನಾಯ್ಕ ನಾರದ ಮುನಿಯಿಂದ ಯಾರಿಗೂ ಬೇಡವಾಗಿದ್ದ ವಾಲ್ಮೀಕಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡು ಜಗತ್ತಿಗೆ ಮಾದರಿಯಾದ ಕುರಿತು ಸವಿಸ್ತಾರವಾಗಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಎನ್ ಮಾತನಾಡಿದರು. ತಹಸೀಲ್ದಾರ ಅಶೋಕ ಭಟ್, ತಾ.ಪಂ ಇ ಒ ವೆಂಕಟೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಜಾಲಿ ಪ.ಪಂ ಎನ್ ಮಂಜಪ್ಪ, ಗೊಂಡ ಸಮಾಜದ ಅಧ್ಯಕ್ಷ ನಾರಾಯಣ ಎಂ ಗೊಂಡ, ಲ್ಯಾಂಪ್ಸ್ ಸೋಸೈಟಿ ಅಧ್ಯಕ್ಷ ವೆಂಕಟೇಶ ಗೊಂಡ, ಮಾರುಕೇರಿ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಗೊಂಡ, ಬೆಳಕೆ ಪಂಚಾಯಿತಿ ಅಧ್ಯಕ್ಷ ಜಗದೀಶ ನಾಯ್ಕ ಸೇರಿ ಇತರರು ಇದ್ದರು. ಪ.ಪಂಗಳ ವಿದ್ಯಾರ್ಥಿಗಳಿಗೆ ಸಚಿವರು ಗೌರವಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಹೆಗಡೆ ಸ್ವಾಗತಿಸಿದರೆ ಶಿಕ್ಷಕ ಸುರೇಶ ಮುರ್ಡೇಶ್ವರ ಕಾರ್ಯಕ್ರಮ ನಿರೂಪಿಸಿದರು.