Slide
Slide
Slide
previous arrow
next arrow

ಕಾಂಗ್ರೆಸಿಗರು ಹೇಡಿತನದ ರಾಜಕಾರಣ ಬದಿಗೊತ್ತಿ, ಪರಿಹಾರ ಕೇಳುವ ಧೈರ್ಯ ತೋರಲಿ; ಅನಂತಮೂರ್ತಿ ವಾಗ್ದಾಳಿ

300x250 AD

ಶಿರಸಿ: ಜಿಲ್ಲೆಯ ಕಾಂಗ್ರೆಸ್ ಸರಕಾರಕ್ಕೆ ಮನುಷ್ಯತ್ವವಿದ್ದಲ್ಲಿ ಮಳೆ ಕಾರಣದಿಂದ ಬಡವರಿಗೆ ಮನೆ ಕಟ್ಟಿಕೊಡುವ ಕೆಲಸ ಆಗಬೇಕಿದೆ. ಕೇರಳಕ್ಕೆ 100 ಮನೆ ಕಟ್ಟಿಕೊಡುವ ಕರ್ನಾಟಕ ಸರಕಾರ ನಮ್ಮ ರಾಜ್ಯದ, ಜಿಲ್ಲೆಯ ಬಡವರಿಗೆ ಮನೆ ಕಟ್ಟಿಕೊಡುವಂತೆ ಕೇಳುವ ತಾಕತ್ತು ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ, ಸಚಿವರಿಗೆ ಇಲ್ಲವೇ ಎಂದು ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಶಿರಸಿಯ ಸಹಾಯಕ ಆಯುಕ್ತರ ಕಛೇರಿಯಲ್ಲಿ ಬಿಜೆಪಿ ರೈತಮೋರ್ಚಾದಿಂದ ಅಡಕೆ ಬೆಳೆ ಹಾನಿ, ಕೊಳೆರೋಗಕ್ಕೆ ಪರಿಹಾರ ಮತ್ತು ಮಳೆಯಿಂದ‌ ಮನೆ ಕಳೆದುಕೊಂಡ ಬಡವರಿಗೆ ರಾಜ್ಯ ಸರಕಾರದಿಂದ ಮನೆ ಕಟ್ಟಿಸಿಕೊಡಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿ, ಮಳೆಯಿಂದ ಜಿಲ್ಲೆಯಲ್ಲಿ ಹಲವರು ಮನೆಯನ್ನು ಕಳೆದುಕೊಂಡಿದ್ದಾರೆ. ಆದರೆ ರಾಜ್ಯ ಸರಕಾರ ಪೂರ್ತಿ ಮನೆ ಕಳೆದುಕೊಂಡವರಿಗೆ ಕೇವಲ ಕಣ್ಣೊರೆಸುವ ತಂತ್ರದ ಭಾಗವಾಗಿ ಕೇವಲ ರೂ. 1 ಲಕ್ಷಗಳಷ್ಟು ಪರಿಹಾರ ನೀಡುತ್ತಿದೆ. ಭಾಗಶಃ ಹಾನಿಯಾದಲ್ಲಿ 5 ರಿಂದ 10 ಸಾವಿರ ನೀಡುತ್ತಿದೆ. ಈ ಪರಿಹಾರ ಮನೆ ಕಟ್ಟಲು ಎಲ್ಲಿ ಸಾಕಾಗುತ್ತದೆ. ಇಂದಿನ ಕಾಲದಲ್ಲಿ ಸುಸಜ್ಜಿತ ಶೌಚಾಲಯ ಕಟ್ಟಲು 1 ಲಕ್ಷ ರೂಪಾಯಿ ಬೇಕಾಗುತ್ತದೆ. ಇದೆಲ್ಲವೂ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ತಿಳಿದಿಲ್ಲವೇ ? ಜಿಲ್ಲೆಯಲ್ಲಿ 156 ಬಡ ಜನರು ಸಂಪೂರ್ಣವಾಗಿ ಮನೆಯನ್ನು ಕಳೆದುಕೊಂಡಿದ್ದಾರೆ. 586 ಜನರ ಮನೆ ಭಾಗಶಃ ಹಾನಿಯಾಗಿದೆ. ತಮ್ಮ ಹೈಕಮಾಂಡ್ ಮೆಚ್ಚಿಸಲು ಕೇರಳಕ್ಕೆ ಮನೆ ಕಟ್ಟಿಕೊಡುವ ಸಿದ್ಧರಾಮಯ್ಯನವರಿಗೆ, ನಮ್ಮ ಜಿಲ್ಲೆಯ ಜನರು ಕಾಣುವುದಿಲ್ಲವೇ ? ನಾವ್ಯಾರು ಭಿಕ್ಷೆ ಕೇಳುತ್ತಿಲ್ಲ, ಜನರ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಸತ್ತಿದ್ಯಾ, ಬದುಕಿದೆಯಾ ಎಂದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಮಳೆಯಿಂದ, ಕೊಳೆರೋಗದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಬಹುತೇಕ ಭಾಗದಲ್ಲಿ ಬೆಳೆ ಹಾಳಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಸರಕಾರದ ಗಮನ ಸೆಳೆದು, ವಿಶೇಷ ಅನುದಾನ ತರಬೇಕೆಂದು ಅವರು ಆಗ್ರಹಿಸಿದರು. ರಾಜ್ಯ ಸರಕಾರ ಈ ಕೂಡಲೇ ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ಪರಿಹಾರ ನೀಡಬೇಕು. ಈ ವರ್ಷ ಭಯಂಕರವಾಗಿ ಮಳೆಯಾಗಿದ್ದರಿಂದ ಅಡಿಕೆ ಬೆಳೆ 50%ರಿಂದ 60%ರಷ್ಟು ಹಾನಿಯಾಗಿದೆ. ರೈತರ ಬೆಳೆ ಕೊಳೆರೋಗಕ್ಕೆ ತುತ್ತಾಗಿ ರೈತರ ಸ್ಥಿತಿ ಚಿಂತಾಜನಕವಾಗಿದ್ದು ಬಹುತೇಕ ರೈತರು ಬೆಳೆಸಾಲ ಮತ್ತು ಇತರೆ ಸಾಲವನ್ನು ತೆಗೆದುಕೊಂಡು ಕೃಷಿಯನ್ನು ನಿರ್ವಹಣೆ ಮಾಡಿರುತ್ತಾರೆ ಈ ರೀತಿ ಕೊಳೆರೋಗ ಬಂದಿದ್ದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದ್ದು ಅಲ್ಲದೆ ಇದಕ್ಕೂ ಮೊದಲು ಹಲವಾರು ಸಂಘ ಸಂಸ್ಥೆಗಳು ಈ ವಿಚಾರವಾಗಿ ಮನವಿ ಮಾಡಿದ್ದರೂ ಸಹ ಸರ್ಕಾರ ಸ್ಪಂದನೆ ಮಾಡದಿರುವುದು ವಿಷಾದನೀಯ ಆದ್ದರಿಂದ ಈ ಕೂಡಲೇ ನಮ್ಮ ಜಿಲ್ಲೆಯ ರೈತರಿಗೆ ವಿಶೇಷ ಪರಿಹಾರದ ಪ್ಯಾಕೇಜನ್ನು ಘೋಷಣೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ವತಿಯಿಂದ ಉಗ್ರವಾದ ಹೋರಾಟವನ್ನು ಮಾಡಬೇಕಾದೀತು ಎನ್ನುವ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಮಳೆಯಿಂದ ಜಿಲ್ಲೆಯ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೊಳೆರೋಗದಿಂದ ಬೆಳೆ ಹಾನಿಯಾಗಿದೆ. ಈ ಕೂಡಲೇ ಸರಕಾರ ವಿಶೇಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ನಗರ ಸಭೆ ಅಧ್ಯಕ್ಷ ಶರ್ಮಿಳಾ ಮಾದನಗೇರಿ ಮಾತನಾಡಿದರು. ಈ ವೇಳೆ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್, ಪಕ್ಷದ ಪ್ರಮುಖರಾದ ನಂದನ ಸಾಗರ ಮಾಜಿ ಜಿಪಂ ಸದಸ್ಯೆ ಶೋಭಾ ನಾಯ್ಕ, ಅಂಕೋಲಾ ರೈತಮೋರ್ಚಾ ಅಧ್ಯಕ್ಷ ಎಮ್.ಎನ್. ಭಟ್ಟ, ಪದರಧಾನ ಕಾರ್ಯದರ್ಶಿ ಸೇರಿದಂತೆ ಜಿಲ್ಲಾ ರೈತಮೋರ್ಚಾದ ಪದಾಧಿಕಾರಿಗಳು, ಬಿಜೆಪಿ ಪ್ರಮುಖರಾದ ಜಿ. ಆರ್. ಹೆಗಡೆ ಬೆಳ್ಳೆಕೇರಿ, ನಾಗರಾಜ ನಾಯ್ಕ, ರವಿಚಂದ್ರ ಶೆಟ್ಟಿ ಸೇರಿದಂತೆ ಇನ್ನಿತರರಿದ್ದರು.

ಮಳೆಯಿಂದ ಸಂಪೂರ್ಣ ಮನೆ ಕಳೆದುಕೊಂಡ ಸಿದ್ದಾಪುರದ ಚೌಡಾ ಮೂಕಾ ಗೊಂಡಾ ತಮ್ಮ ಸಂಕಷ್ಟವನ್ನು ನೆರೆದ ಸಾರ್ವಜನಿಕರೆದುರು ಎಳೆಎಳೆಯಾಗಿ ಬಿಚ್ಚಿಟ್ಟರು. ಈ ವೇಳೆ ಬಿಜೆಪಿ ರೈತಮೋರ್ಚಾ ಮನೆ ಕಳೆದುಕೊಂಡ ಎಲ್ಲ ಬಡವರ ಪರವಾಗಿ ಮುಂದೆನಿಂತು, ಹೋರಾಟ ಮಾಡುವುದಾಗಿ ಭರವಸೆ ನೀಡಿತು.

ಹಿರಿಯ ನಾಯಕ ದೇಶಪಾಂಡೆ ರಾಜಕೀಯ ಬದಿಗಿಟ್ಟು, ಮುತ್ಸದ್ಧಿತನ ತೋರಲಿ:

ರಾಜ್ಯದ ಹಿರಿಯ ರಾಜಕಾರಣಿ ದೇಶಪಾಂಡೆಯವರು ಜಿಲ್ಲೆಯ ಜನರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ತಮ್ಮ ಮುತ್ಸದ್ಧಿತನವನ್ನು ತೋರಬೇಕು. ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಕೇವಲ ಭಟ್ಕಳಕ್ಕೆ ಮಾತ್ರ ಸಚಿವರಾಗಿದ್ದಾರೆ. ಶಿರಸಿ ಕ್ಷೇತ್ರದ ಶಾಸಕರಾದ ಭೀಮಣ್ಣನವರಿಗೆ ಮುಖ್ಯಮಂತ್ರಿ ಬಳಿ ಮಾತನಾಡಿ ಪರಿಹಾರ ತರುವ ತಾಕತ್ತಿಲ್ಲವೇ ಎಂದು ಅನಂತಮೂರ್ತಿ ಹೆಗಡೆ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

ರಾಜಕಾರಣಿಗಳಿಗೆ ಮೊದಲು ಮನುಷ್ಯತ್ವವಿರಬೇಕು :

300x250 AD

ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವ ಗುಣ ರಾಜಕೀಯ ನಾಯಕರಿಗೆ ಮೊದಲು ಇರಬೇಕು. ಸರಕಾರ ತಮಗೆ ಗೂಟದ ಕಾರು, ಪಗಾರು ಎಲ್ಲವನ್ನೂ ತಮಗೆ ನೀಡಿದೆ. ರಾಜಕಾರಣಿಗಳಿಗೆ ಮೊದಲು ಮಾನವೀಯತೆ, ಮನುಷ್ಯತ್ವ ಇರಬೇಕು. ರಾಜಕೀಯ ಮಾಡುವ ಮೊದಲು ಬಡವರಿಗೆ ಪರಿಹಾರ ದೊರಕಿಸಿ. – ಅನಂತಮೂರ್ತಿ ಹೆಗಡೆ,‌ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ

Share This
300x250 AD
300x250 AD
300x250 AD
Back to top