Slide
Slide
Slide
previous arrow
next arrow

ನರೇಗಾ ಕೂಲಿಕಾರರ ಮಗ ಮಯೂರನಿಗೆ 7 ಚಿನ್ನದ ಪದಕ

300x250 AD

ಬಡ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗೆ ಸಹಕಾರಿಯಾದ ನರೇಗಾ ಕೂಲಿ ಹಣ

ಯಲ್ಲಾಪುರ: ಸಮಾಜದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಬಡತನದ ಹೊಡೆತಕ್ಕೆ ಸಿಲುಕಿ ಕಮರಿದ ಉದಾಹರಣೆಗಳ ನಡುವೆಯೇ ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ಕುಟುಂಬ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಪಂನಿಂದ ಕೈಗೊಳ್ಳುವ ಸಮುದಾಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಿರಂತರವಾಗಿ ಕೂಲಿ ಕೆಲಸ ಮಾಡಿ, ನರೇಗಾ ಕೂಲಿ ಹಣದಲ್ಲಿಯೇ ಮಗ ಮಯೂರನಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡಿಸಿದ್ದು, ಸ್ನಾತಕೋತ್ತರ ವಿದ್ಯಾರ್ಥಿ ಮಯೂರನೂ ಸಹ ಕಾಲೇಜ್‌ನ ರಜೆ ಅವಧಿಯಲ್ಲಿ ಗ್ರಾಮಕ್ಕೆ ಬಂದಾಗ ನರೇಗಾ ಕೂಲಿ ಕೆಲಸ ನಿರ್ವಹಿಸುವ ಮೂಲಕ ಉತ್ತಮ ಅಧ್ಯಯನ ನಡೆಸಿ ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ 74ನೇ ಘಟಿಕೋತ್ಸದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಏಳು ಚಿನ್ನದ ಪದಕ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ರಾಮಚಂದ್ರ ಖಿಲಾರಿ ಕುಟುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆMGNREGA)ಯ ಕೆಲಸದ ಮೇಲೆ ಅವಲಂಬಿತವಾಗಿದ್ದು, 2022 ರಿಂದ 2024ರ ವರೆಗೆ ನಿರಂತರವಾಗಿ ಕೂಲಿ ಕೆಲಸ ನಿರ್ವಹಿಸುತ್ತಿದೆ. ಅಲ್ಲದೇ ನರೇಗಾ ಕೂಲಿ ಹಣದಲ್ಲಿಯೇ ಮಗ ಮಯೂರನ ವಿದ್ಯಾಭ್ಯಾಸದ ಖರ್ಚುವೆಚ್ಛ, ಮನೆಯ ನಿರ್ವಹಣೆ ಹೊಣೆಯನ್ನು ನಿಭಾಯಿಸಿಕೊಂಡು ಬರುತ್ತಿದೆ.

2022-23ನೇ ಸಾಲಿನಲ್ಲಿ 70 ದಿನ ಕೆಲಸ ಮಾಡಿ ಒಟ್ಟು 21630 ರೂ. ಕೂಲಿ, 2023-24ನೇ ಸಾಲಿನಲ್ಲಿ 97 ದಿನ ಕೂಲಿ ಕೆಲಸ ಮಾಡಿ ಒಟ್ಟು 30652 ರೂ. ಕೂಲಿ ಹಾಗೂ 2024-25ನೇ ಸಾಲಿನಲ್ಲಿ ಈವರೆಗೆ 29 ದಿನ ಕೂಲಿ ಕೆಲಸ ಮಾಡಿ ಒಟ್ಟು 10121 ರೂ. ಕೂಲಿ ಹಣವನ್ನ ಪಡೆದುಕೊಂಡಿದೆ. ಒಟ್ಟಾರೆಯಾಗಿ ನರೇಗಾದಡಿ ಕಳೆದ 3 ವರ್ಷದಲ್ಲಿ 196 ದಿನ ಕೂಲಿ ಕೆಲಸ ಮಾಡಿ ಒಟ್ಟು 62403 ರೂಪಾಯಿ ಕೂಲಿ ಹಣ ಪಡೆದಿದೆ. ನರೇಗಾ ಕೂಲಿ ಕೆಲಸದಿಂದ ಗಳಿಸಿದ ಈ ಹಣವನ್ನು ಮಗ ಮಯೂರನ ಸ್ನಾತಕೋತ್ತರ ವ್ಯಾಸಾಂಗಕ್ಕೆ ಬಳಸಿದ್ದು, ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ನೆರವಾಗಿದೆ.

ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಪೂರಕವಾಗಿದ್ದು, ಹೊಸಳ್ಳಿ ಗ್ರಾಮದಲ್ಲಿ ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ದಂಪತಿ ಸೇರಿದಂತೆ ಎರಡು ಜನ ಗಂಡು ಮಕ್ಕಳನ್ನೊಳಗೊಂಡ ನಾಲ್ಕು ಜನರ ಕುಟುಂಬ ಸ್ವಂತ ಜಮೀನು ಇರದ ಕಾರಣ ಗ್ರಾಮ ಪಂಚಾಯತಿಯಿಂದ ನರೇಗಾದಡಿ ಕೈಗೊಂಡ ಸಮುದಾಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಿರಂತರವಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದೆ.
ಕಡು ಬಡತನದಲ್ಲಿಯೂ ಮಗನಿಗೆ ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದಲು ಅನುಕೂಲ ಮಾಡಿಕೊಟ್ಟೆವು. ಮನೆಯ ಪರಿಸ್ಥಿತಿ ಅರಿತ ಮಗ ಕಾಲೇಜಿನ ರಜೆಯ ದಿನಗಳಲ್ಲಿ ಗ್ರಾಮಕ್ಕೆ ಬಂದಾಗ ಸ್ವತಃ ನರೇಗಾ ಕೂಲಿ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅದಲ್ಲದೇ ಕೆಲವು ಸಂದರ್ಭಗಳಲ್ಲಿ ಫೋಷಕರಿಗೂ ಸಹಾಯಕನಾಗಿ ಕೆಲಸ ಮಾಡಿದ್ದಾನೆ. ಮಗನ ಸಾಧನೆಗೆ ಬಡತನ, ಸಿರಿತನ ಅಡ್ಡಿಯಾಗಲಿಲ್ಲ. ಸಾಧಿಸುವ ಛಲ, ಆತ್ಮಸ್ಥೈರ್ಯ, ಪೋಷಕರ ಬೆಂಬಲದೊಂದಿಗೆ ಉತ್ತಮವಾಗಿ ಓದಿ ಗ್ರಾಮಕ್ಕೆ ಕೀರ್ತಿ ತಂದಿರುವುದಕ್ಕೆ ತುಂಬಾ ಖುಷಿಯಾಗಿದೆ ಎನ್ನುತ್ತಾರೆ ವಿದ್ಯಾರ್ಥಿಯ ತಂದೆ ರಾಮಚಂದ್ರ ಖಿಲಾರಿ.

300x250 AD

ಮನೆಯಲ್ಲಿ ಬಡತ ತಾಂಡವಾಡುತ್ತಿದ್ದ ಕಾರಣಕ್ಕೆ ಮೊದಲಿಗೆ ಉನ್ನತ ಶಿಕ್ಷಣ ಪೂರೈಸುವ ಕುರಿತು ಆತಂಕ ಎದುರಾಗಿತ್ತು. ಆದರೆ ನರೇಗಾದಡಿ ಕೂಲಿ ಕೆಲಸ ಮಾಡಿ ನಿನ್ನ ಓದಿಸುತ್ತೇವೆ ಎಂಬ ಪೋಷಕರ ಬೆಂಬಲ ನನ್ನ ನೆಮ್ಮದಿಯ ಓದಿಗೆ ಉತ್ತೇಜನ ನೀಡಿತು. ನರೇಗಾದಡಿ ಸಿಗುವ ಕೂಲಿ ಕೆಲಸದಿಂದ ಪೋಷಕರು ನೆಮ್ಮದಿಯಿಂದ ಇದ್ದರು. ಹೀಗಾಗಿ ನಿರಾತಂಕವಾಗಿ ಅಭ್ಯಾಸ ಮಾಡಲು ಮಹಾತ್ಮ ಗಾಂಧಿ ನರೇಗಾ ಯೋಜನೆಯು ಆರ್ಥಿಲ ಹಾಗೂ ಮಾನಸಿಕವಾಗಿ ಧೈರ್ಯ ತುಂಬಿದರ ಪರಿಣಾಮ ಉತ್ತಮ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಸ್ನಾತಕೋತ್ತರ ವಿದ್ಯಾರ್ಥಿ ಮಯೂರ ಖಿಲಾರಿ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 74ನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಸಮ ಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಬಡತನದಲ್ಲಿ ಅರಳಿದ ಪ್ರತಿಭಾವಂತ ವಿದ್ಯಾರ್ಥಿ ಮಯೂರ ಖಿಲಾರಿ ಅವರಿಗೆ ಏಳು ಚಿನ್ನದ ಪದಕ ಹಾಗೂ ಅಭಿನಂದನಾ ಪತ್ರ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಪ್ರೊ. ಎಸ್. ಅಯ್ಯಪ್ಪನ್, ಅಧ್ಯಕ್ಷರು ಎನ್ಎಬಿಎಲ್ ಗುರ‍್ಗಾಂವ್, ಮಾಜಿ ಕಾರ್ಯದರ್ಶಿ ಡಿಎಆರ್‌ಇ ಡೈರೆಕ್ಟರ್ ಜನರಲ್ ಐಸಿಎಆರ್ ನವದೆಹಲಿ, ಕುಲಪತಿ ಕೇಂದ್ರೀಯ ಕೃಷಿ ವಿದ್ಯಾಲಯ, ಇಂಫಾಲ್ ಅಧ್ಯಕ್ಷರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಇವರು ಉಪಸ್ಥಿತರಿದ್ದರು.

ಮಯೂರ ಖಿಲಾರಿ ಪಡೆದ ಏಳು ಪದಕ: ದಿವಂಗತ ಪ್ರೋ. ಆರ್.ಟಿ. ಜಂಗಮ ಬಂಗಾರದ ಪದಕ, ದಿವಂಗತ ಪ್ರೋ. ಹೆಚ್.ಎಸ್. ಹೊಸಮನಿ ಸ್ಮಾರಕ ಬಂಗಾರದ ಪದಕ, ಪ್ರೋ. ವಿ.ಟಿ. ಪಾಟೀಲ ಬಂಗಾರದ ಪದಕ, ಪ್ರೋ. ಎ.ಎಂ. ರಾಜಶೇಖರಯ್ಯ ಬಂಗಾರದ ಪದಕ, ಶ್ರೀ. ಹರ್ಡೆಕರ್ ಮಂಜಪ್ಪ ಸ್ಮಾರಕ ಗ್ರಂಥಮಾಲ ಬಂಗಾರದ ಪದಕ, ಶ್ರೀಮತಿ ಪವಿತ್ರಾ ಮತ್ತು ಡಾ. ಹೆಚ್‌.ಎಂ. ವಿರುಪಾಕ್ಷಯ್ಯ ಬಂಗಾರದ ಪದಕ, ಕೆ‌ಎಸ್‌ಎಸ್‌ ಬಂಗಾರದ ಪದಕ ಸೇರಿದಂತೆ ಒಟ್ಟು ಏಳು ಚಿನ್ನದ ಪದಕ, ಪ್ರಶಸ್ತಿ ಪತ್ರ ಪಡೆದಿದ್ದಾರೆ.

Share This
300x250 AD
300x250 AD
300x250 AD
Back to top