ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ದಾಂಡೇಲಪ್ಪಾ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 65ನೇ ವಾರ್ಷಿಕ ಸಭೆಯು ಸಂಘದ ಸಭಾಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಅರ್ಜುನ ಮಿರಾಶಿ, ಸಂಘದ ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ತುಂಬು ಹೃದಯದ ಸಹಕಾರದಲ್ಲಿ ಮತ್ತು ಸಂಘದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಶ್ರಮದಿಂದಾಗಿ ಸಂಘವು ವರ್ಷದಿಂದ ವರ್ಷಕ್ಕೆ ಉತ್ತರೋತ್ತರ ಪ್ರಗತಿಯನ್ನು ಸಾಧಿಸುತ್ತಿದೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆ.ಡಿಸಿ.ಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಅಧಿಕಾರಿಗಳ ಸಕಾಲಿಕ ಮಾರ್ಗದರ್ಶನದಿಂದಾಗಿ ಹಲವಾರು ಜನಪರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ. ರೈತರಿಗೆ ತ್ವರಿತಗತಿಯಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಕೂಡ ಸಹಕಾರಿ ಸಂಘವು ಮಾಡುತ್ತಾ ಬಂದಿದೆ. ಸಂಘದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಇದೇ ರೀತಿ ಸರ್ವ ರೀತಿಯ ಸಹಕಾರವನ್ನು ನೀಡಬೇಕೆಂದು ವಿನಂತಿಸಿದರು.
2023 – 24 ನೇ ಸಾಲಿನ 65ನೇ ವಾರ್ಷಿಕ ವರದಿಯನ್ನು ವಾಚಿಸಿ ಮಾತನಾಡಿದ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಕೃಷ್ಣಾ ಪೂಜಾರಿ ಅವರು ಅತ್ಯುತ್ತಮ ಕಾರ್ಯ ನಿರ್ವಹಣೆಯ ಮೂಲಕ 23 ಬಾರಿ ಕೆಡಿಸಿಸಿ ಬ್ಯಾಂಕ್ ಕೊಡಮಾಡುವ ಉತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ನಮ್ಮ ಸಂಘವು ಭಾಜನವಾಗಿದೆ. ರಾಜ್ಯ ಅಪೆಕ್ಸ್ ಬ್ಯಾಂಕ್ ಕೊಡಮಾಡುವ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು 10 ಬಾರಿ ಪಡೆದ ಹೆಗ್ಗಳಿಕೆ ನಮ್ಮ ಸಂಘಕ್ಕಿದೆ. ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳ, ಸದಸ್ಯರ ಸಕಾಲಿಕವಾದ ಮಾರ್ಗದರ್ಶನ, ಸಂಘದ ಸರ್ವ ಸದಸ್ಯರ ಸಂಪೂರ್ಣ ಸಹಕಾರದಿಂದ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಬಹಳ ದೊಡ್ಡ ಮಟ್ಟದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ಹೇಳಿ, ಸಂಘದ ಬೆಳವಣಿಗೆಗೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸುತ್ತಿರುವ ಸರ್ವರಿಗೂ ಸಂಘವು ಸದಾ ಋಣಿಯಾಗಿರುತ್ತದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಂತಾನ.ಬಿ.ನಾಯ್ಕ, ನಿರ್ದೇಶಕರುಗಳಾದ ಶಂಕರ ಎನ್.ಮಿರಾಶಿ, ಮಾರುತಿ.ಜಿ.ಮಿರಾಸಿ, ಪಾಂಡುರಂಗ ಬಿ.ವಟ್ಕೇಕರ, ಓಮಣ್ಣ ವೈ.ಮೊಗ್ರಿ, ಶಾಂತಾ ಎನ್.ಪಿಶಾಳಿ, ಚಂದ್ರಹಾಸ ಪೂಜಾರಿ, ರತ್ಮಾ.ಆರ್.ಮಿರಾಶಿ, ಯಶೋಧಾ.ಸಿ.ಮಿರಾಶಿ, ಮಾರುತಿ ಕಾಂಬ್ರೇಕರ, ಶಾಂತಾರಾಮ ಹರಿಜನ, ವಿಲ್ಸನ್ ನಾರಗೋಳಕರ ಭಾಗವಹಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿ, ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕೃಷ್ಣಾ ಪೂಜಾರಿ ಅವರು ಸ್ವಾಗತಿಸುತ್ತಾ ಕಾರ್ಯಕ್ರಮಕ್ಕೆ ಸಂಘದ ಸಹಾಯಕ ಕಾರ್ಯನಿರ್ವಾಹಕರಾದ ಮನೋಹರ ವಿ.ಬಾತಕಾಂಡೆ ವಂದಿಸಿದರು, ಚಂದ್ರಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯಲ್ಲಿ ಸಂಘದ ಸದಸ್ಯರು, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.