ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾವಂಚೂರು ವಲಯದ ಮುಸವಳ್ಳಿ ಕಾರ್ಯಕ್ಷೇತ್ರದ ಜಿಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಇವರ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುಭಾಸ ನಾಯ್ಕ ಕಾನಸೂರು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸರಿಯಾದ ಶಿಕ್ಷಣ ಪಡೆದು ಸಮಾಜದ ಸುಧಾರಣೆಗೆ ಮುಂದಾಗಬೇಕು. ಉತ್ತಮ ಜೀವನ ನಡೆಸಬೇಕಾದ ಯುವ ಸಮೂಹ ದುಶ್ಚಟಗಳಿಗೆ ಬಲಿಯಾದರೆ ದೇಶದ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಮದ್ಯವರ್ಜನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಶಿಕ್ಷಕ ಚಂದ್ರು ದುಶ್ಚಟಗಳಿಂದ ದೂರ ಇದ್ದು ಆರೋಗ್ಯಕರವಾದ ಜೀವನದ ಕುರಿತು ಕಾಳಜಿವಹಿಸಬೇಕು. ಅದರಂತೆ ಮೊಬೈಲ್ ಬಳಕೆಯೂ ಕೂಡ ಒಂದು ದುರಾಭ್ಯಾಸ ಎಂದು ಹೇಳಿದರು. ಶಾಲಾ ಮುಖ್ಯಾಧ್ಯಾಪಕ ಪ್ರಕಾಶ ಭಟ್ಟ ಅಧ್ಯಕ್ಷತೆವಹಿಸಿದ್ದರು.ತಾಲೂಕು ಯೋಜನಾಧಿಕಾರಿ ಗಿರೀಶ ಪ್ರಾಸ್ತಾವಿಕ ಮಾತನಾಡಿದರು. ಸೇವಾ ಪ್ರತಿನಿಧಿ ಅಣ್ಣಪ್ಪ ಸ್ವಾಗತಿಸಿದರು. ಶಿಕ್ಷಕ ಹರೀಶ ವಂದಿಸಿದರು. ಕಾವಂಚೂರು ವಲಯದ ಮೇಲ್ವಚಾರಕಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.