* ಶ್ರೀಧರ ಅಣಲಗಾರ
ಯಲ್ಲಾಪುರ: ಯಕ್ಷರಂಗದ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರ ‘ಯಕ್ಷಗಾನ ಗಾನ ಸಂಹಿತೆ’ ಗ್ರಂಥವು ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆಯಾಗಿದೆ. ಯಕ್ಷಗಾನದ ಕಲಿಕಾಸಕ್ತರಿಗೆ, ವಿಶೇಷವಾಗಿ ಭಾಗವತರಿಗೆ ಮಾರ್ಗದರ್ಶಕವಾಗಿರುವ ಈ ಅಪರೂಪದ ಕೃತಿಯನ್ನು ಗುರುತಿಸಿರುವುದು ಅಕಾಡೆಮಿಯ ಗೌರವ ಹೆಚ್ಚಿಸಿದೆ.
ಯಕ್ಷಗಾನದ ಬಗೆಗೆ ಅನೇಕ ಗ್ರಂಥಗಳು ಬಂದರೂ ಕಲಿಕಾಸಕ್ತರಿಗೆ, ಅದರಲ್ಲೂ ಭಾಗವತರಿಗೆ ಪ್ರಯೋಜನವಾಗುವ ಕೃತಿಗಳು ಬಂದಿರುವುದು ವಿರಳ. ಆ ಕಾರಣದಿಂದ ವಿದ್ವಾನರು 7 ತಿಂಗಳ ಅವಧಿಯಲ್ಲಿ, 430 ಪುಟಗಳ ಈ ಗ್ರಂಥ ಬರೆದಿದ್ದಾರೆ. ಕಳೆದ ವರ್ಷ ಲೋಕಾರ್ಪಣೆಗೊಂಡಿದೆ.
ಯಕ್ಷಗಾನ ಹಾಡುಗಾರಿಕೆಗೆ ಮಹತ್ವ ನೀಡಿ ಈ ಕೃತಿ ರಚಿಸಲಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ 100 ಕ್ಕೂ ಹೆಚ್ಚು ರಾಗಗಳನ್ನು ನಿಖರವಾಗಿ ಹಾಡಬಲ್ಲ ವಿದ್ವಾನ್ ಗಣಪತಿ ಭಟ್ಟರು, ಇಜ ಪುಸ್ತಕದಲ್ಲಿ ರಾಗಗಳಲ್ಲಿ ಯಕ್ಷಗಾನ ಪ್ರಸಂಗದ ಪದ್ಯಗಳಿಗೆ ಸ್ವರ ಪ್ರಸ್ತಾರ ಅಳವಡಿಸಿರುವುದು ವಿಶೇಷವಾಗಿದೆ. ಜತೆಗೆ ಯಕ್ಷಗಾನದ ಸಂಪೂರ್ಣ ಸಭಾ ಲಕ್ಷಣಕ್ಕೆ ಸ್ವರ ಪ್ರಸ್ತಾರ ಅಳವಡಿಸಿದ್ದಾರೆ. ಯಕ್ಷಗಾನ ಪದ್ಯಗಳಿಗೆ ಸ್ವರ ಪ್ರಸ್ತಾರ ಹಾಕುವ ಕಲ್ಪನೆ ಇದೇ ಪ್ರಥಮ.
ಯಕ್ಷಗಾನದ ಹುಟ್ಟು, ಬೆಳವಣಿಗೆಯ ಕುರಿತು ವಿಸ್ತಾರವಾಗಿ ಹೇಳಿದ್ದಾರೆ. ಸಂಗೀತ ಮತ್ತು ಯಕ್ಷಗಾನಕ್ಕೆ ಇರುವ ಸಾಮ್ಯತೆ, ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನಕ್ಕೆ ಇರುವ ಸಂಬಂಧ, ಶಾಸ್ತ್ರೀಯ ರಾಗಗಳು ಯಕ್ಷಗಾನದಲ್ಲಿ ಹೇಗೆ ಪ್ರಯೋಗಿಸಲ್ಪಟ್ಟಿವೆ ಎಂಬುದನ್ನು ವಿವರಿಸಿದ್ದಾರೆ.
ಯಕ್ಷಗಾನ ಶೈಲಿ ಬೆಳೆದು ಬಂದ ರೀತಿ, ಯಕ್ಷಗಾನ ಶೈಲಿಯಲ್ಲಿ ಬಳಸುವ ರಾಗಗಳ ವಿವರಗಳು, ಯಕ್ಷಗಾನದಲ್ಲಿ ಬಳಕೆಯಾಗುವ ಮಟ್ಟುಗಳು, ಅದರ ಸ್ವರೂಪದ ಬಗ್ಗೆ ವಿವರಣೆ ನೀಡಿದ್ದಾರೆ. ಕರ್ನಾಟಕ ಸಂಗೀತದಲ್ಲಿ ಬಳಸುವ ತಾಳಗಳು ಮತ್ತು ಯಕ್ಷಗಾನದ ತಾಳಗಳಿಗೆ ಇರುವ ಸಾಮ್ಯತೆಗಳನ್ನು ತೆರೆದಿಟ್ಟಿದ್ದಾರೆ.
ಯಕ್ಷಗಾನದಲ್ಲಿ ಭಾಗವತರು, ಚಂಡೆ ಮದ್ದಳೆವಾದಕರು, ವೇಷಧಾರಿಗಳು ತಮ್ಮ ಹೊಣೆಗಾರಿಕೆಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಮಾರ್ಗದರ್ಶನವೂ ಕೃತಿಯಲ್ಲಿದೆ. ಯಕ್ಷಗಾನದಲ್ಲಿ ನವರಸಗಳ ಪ್ರಾಮುಖ್ಯತೆ ಎಷ್ಟು, ಅವುಗಳ ಬಳಕೆಯನ್ನು ರಸೋಚಿತವಾಗಿ ಹೇಗೆ ಮಾಡಬೇಕು, ಯಾವ ರಸಭಾವಗಳಿಗೆ ಸಂದರ್ಭೋಚಿತವಾಗಿ, ಯಾವ ರಾಗಗಳನ್ನು ಹೇಗೆ ಬಳಸಬೇಕು, ಒಂದೊಂದು ರಸಗಳಿಗೂ ಎಷ್ಟು ರಾಗಗಳನ್ನು ಬಳಸಬಹುದು ಎಂಬುದರ ವಿವರಣೆಯೂ ಇದೆ. ರಂಗದ ನಡೆಗಳನ್ನು ಕುರಿತು ವಿವರಗಳೂ ಸೇರಿದಂತೆ ಯಕ್ಷಗಾನಕ್ಕೆ ಪೂರಕವಾದ ಅನೇಕ ವಿಷಯಗಳನ್ನು ಒಳಗೊಂಡಿರುವ ಗ್ರಂಥ ಇದಾಗಿದೆ.
ಈ ಗ್ರಂಥವನ್ನು ಗುರುತಿಸಿ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಯಕ್ಷಗಾನ ಕ್ಷೇತ್ರದಲ್ಲಿ 4 ದಶಕಕ್ಕೂ ಅಧಿಕ ಕಾಲದ ಅನುಭವ ಹೊಂದಿರುವ ವಿದ್ವಾನರಿಗೆ ಈ ಗೌರವ ಸಂದಿರುವುದು ಕಲಾಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
* ಯಕ್ಷಗಾನದ ಕಲಾವಿದನಾಗಿ ಕಲಾ ಮಾತೆಗೆ ಯಕ್ಷಗಾನೀಯ ರೀತಿಯಲ್ಲಿ ಋಣ ಸಂದಾಯ ಮಾಡಬೇಕೆಂಬ ಬಹಳ ವರ್ಷದ ಆಸೆ ಈ ಗ್ರಂಥ ರಚನೆಗೆ ಕಾರಣ. ಇದನ್ನು ಅಕಾಡೆಮಿ ಗುರುತಿಸಿರುವುದು ಸಂತೋಷ. ಕಲಾಮಾತೆಯ ಆಶೀರ್ವಾದ, ತಂದೆ ತಾಯಿಗಳ ಆಶೀರ್ವಾದ, ಕಲಾಭಿಮಾನಿಗಳ, ಕಲಾ ಪ್ರೇಕ್ಷಕರ ಹಾರೈಕೆಯ ಫಲದಿಂದ ಇದು ಸಾಧ್ಯವಾಗಿದೆ.
| ವಿದ್ವಾನ್ ಗಣಪತಿ ಭಟ್ಟ, ಹಿರಿಯ ಭಾಗವತರು.