ದಾಂಡೇಲಿ : ಜಿಲ್ಲಾಡಳಿತ ಉತ್ತರ ಕನ್ನಡ, ತಾಲೂಕಾಡಳಿತ, ನಗರ ಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ನಗರದ ನಂದಗೋಕುಲ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಮಂಗಳವಾರ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ್ ಅವರು ಈ ಅಭಿಯಾನವು ಅಕ್ಟೋಬರ್ ಒಂದರವರೆಗೆ ನಡೆಯಲಿದ್ದು, ಈಗಾಗಲೇ ಪ್ರತಿದಿನ ಆಯ್ದ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಈ ಅಭಿಯಾನವನ್ನು ಸ್ವಚ್ಛತೆಗಾಗಿ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ನಗರದ ಸ್ವಚ್ಛತೆಯ ನಿಟ್ಟಿನಲ್ಲಿ ಸಾರ್ವಜನಿಕರು ನಗರಸಭೆಯ ಜೊತೆ ಕೈಜೋಡಿಸುವಂತೆ ಕರೆ ನೀಡಿದರು. ಈ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ನಗರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ, ನಗರಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಮೌಲಾಲಿ ಮುಲ್ಲಾ, ಮೋಹನ ಹಲವಾಯಿ, ಅನಿಲ್ ನಾಯ್ಕರ್, ಆಸೀಪ್ ಮುಜಾವರ, ಮಹಾದೇವ ಜಮಾದಾರ, ರುಕ್ಮಿಣಿ ಬಾಗಾಡೆ, ವೆಂಕಟ್ರಮಣಮ್ಮ ಮೈಥುಕುರಿ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.