ಶಿರಸಿ: ಜಗತ್ತಿನ ಮೊದಲ ವಿಜ್ಞಾನ ಪಿಲಾಸಫಿ, ಭಾರತೀಯ ಸಂಸ್ಕೃತಿ. ಸಂಸ್ಕಾರ, ಸನಾತನತೆ ಈ ಫಿಲಾಸಫಿಯಲ್ಲಿದೆ. ಇದನ್ನು ಕರಗತ ಮಾಡಿಕೊಂಡು ನಮಗೆಲ್ಲ ಆದರ್ಶಪ್ರಾಯವಾದ ಶಿಕ್ಷಕರೆಂದರೆ ಡಾ ಸರ್ವಪಳ್ಳಿ ರಾಧಾಕೃಷ್ಣನ್ ಎಂದು ಎಂ ಎಂ ಕಾಲೇಜಿನ ಪ್ರಾಚಾರ್ಯ ಪ್ರೋ. ಜಿ.ಟಿ.ಭಟ್ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ಮಾತನಾಡುತ್ತಿದ್ದರು.
ಹತ್ತಾರು ವಿಷಯಗಳಲ್ಲಿ ಪ್ರಜ್ಞಾವಂತಿಕೆ, ಜ್ಞಾನವನ್ನು ಹೊಂದಿದ ಮೇರುವ್ಯಕ್ತಿತ್ವ ರಾಧಾಕೃಷ್ಣನ್ ಅವರಾಗಿತ್ತು. ವಿದ್ಯಾರ್ಥಿಗಳನ್ನು ತನ್ನ ಜ್ಞಾನಶಕ್ತಿಯಿಂದ ಸೆಳೆದು ವಿದ್ಯಾರ್ಥಿಗಳಲ್ಲಿ ಮೌಲ್ಯವರ್ಧನೆಯನ್ನ ಮಾಡಿ ಎಲ್ಲಾ ಶಿಕ್ಷಕರು ಹೇಗೆ ಪಾಠ ಮಾಡಬೇಕೆಂಬ ಆದರ್ಶವನ್ನು ಬಿತ್ತಿ ಹೋದವರು ಎಂದರು.
ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ.ಎಂ.ಎನ್. ಭಟ್ ಮಾತನಾಡಿ ವಿದ್ಯಾರ್ಥಿಗಳನ್ನು ಒಬ್ಬ ಗುರು ಸಮಾಜದಲ್ಲಿ ಎಷ್ಟು ಎತ್ತರಕ್ಕೆ ಏರಿಸಬಲ್ಲ ಎನ್ನುವುದಕ್ಕೆ ರಾಧಾಕೃಷ್ಣನ್ ಉದಾಹರಣೆಯಾಗಿದ್ದಾರೆ. ನಮ್ಮ ಭಾರತ ಕಂಡ ಅದ್ಬುತ ವ್ಯಕ್ತಿತ್ವಗಳಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ ಇವರೆಲ್ಲ ಸೇರುತ್ತಾರೆ. ಇವರಿಗೆ ಬೇರೆ ಯಾರ ಹೋಲಿಕೆಯು ಇಲ್ಲ. ಇವರಿಗೆ ಇವರೇ ಸರಿಸಾಟಿ. ಶಿಕ್ಷಕರಿಗೆ ಜಾತಿ ಧರ್ಮ ಎನ್ನುವ ಭೇದವಿರುವುದಿಲ್ಲ. ವಿದ್ಯಾರ್ಥಿಗಳನ್ನು ಶಿಕ್ಷತ ರನ್ನಾಗಿಸಿ ಉತ್ತಮ ವ್ಯಕ್ತಿತ್ವವನ್ನು ಸಮಾಜಕ್ಕೆ ನೀಡುವುದೇ ಅವರ ಉದ್ದೇಶ ಆಗಿರುತ್ತದೆ. ಭಾರತ ರಾಮ ರಾಜ್ಯವಾಗಬೇಕೆಂದರೆ ತಾಯಿಯ ಸಂಸ್ಕಾರ ತಂದೆಯ ಗುರಿ ಗುರುವಿನ ಜ್ಞಾನ ಮತ್ತು ತೋರುವ ದಾರಿ ಮುಖ್ಯವಾಗಿದ್ದು ಇದರಿಂದ ದೇಶ ಸುಭದ್ರವಾಗುತ್ತದೆ ಎಂದರು. ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಗಿಡಗಳನ್ನ ಕೊಡುವ ಮೂಲಕವಾಗಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಆಟ, ಹಾಸ್ಯ, ಮನೋರಂಜನೆಯನ್ನು ಹೊಂದಿರುವ ಕ್ರಿಯಾಶೀಲ ಚಟುವಟಿಕೆಗಳನ್ನ ಶಿಕ್ಷಕರಿಗಾಗಿ ಆಯೋಜಿಸಲಾಗಿತ್ತು. ವೇದಿಕೆ ಮೇಲೆ ಹಿಂದಿ ವಿಭಾಗ ಮುಖ್ಯಸ್ಥೆ ಡಾ. ಸುಜಾತಾ ಪಿ., ಸಂಗೀತ ವಿಭಾಗ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಭಟ್, ಸಂಜೀವ್ ಪೋತಧಾರ್, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಗಣೇಶ ಹೆಗಡೆ, ಬೌತಶಾಸ್ತ್ರ ವಿಭಾಗ ಮುಖ್ಯಸ್ಥ ಆರ್ ವೈ ಕೋಳಕರ್ ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪವನ ಸ್ವಾಗತಿಸಿದರು.ಶ್ರೀರೇಖಾ ಭಟ್ ನಿರೂಪಣೆ.