ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಶಿಕ್ಷಕರ ದಿನಾಚರಣೆ’ಯ ನಿಮಿತ್ತ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೆಗಡೆಯ ಶಾಂತಿಕಾಂಬಾ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕಿಯಾದ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ಸನ್ಮಾನಿತರಾದ ಶ್ರೀಮತಿ ವೀಣಾ ಕೂರ್ಸೆ, ಶಿಕ್ಷಕರಾದವರು ಮಕ್ಕಳ ಮನಸ್ಸನ್ನು ಅರಿತು ಪಾಠ ಮಾಡಬೇಕು, ಶಿಸ್ತು, ಸಂಯಮ ಮತ್ತು ವಿಷಯ ಪ್ರಭುದ್ಧತೆಯನ್ನು ಬೆಳೆಸಿಕೊಳ್ಳಿ, ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಿರಿ ಎಂದು ಶಿಕ್ಷಕ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಆಭರಣ ಜ್ಯುವೆಲರ್ಸ್ ಕುಮಟಾ ಶಾಖೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಮೇಶ ಪೈ ಶಿಕ್ಷಕನು ಸಮಾಜದ ಶಿಲ್ಪಿ ಎಂದು ಹೇಳಿ ಸಭೆಯಲ್ಲಿ ಉಪಸ್ಥಿತರಿರುವ ಎಲ್ಲ ಉಪನ್ಯಾಸಕರಿಗೆ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಸಂಬಂಧ, ಜೀವನ ಕೌಶಲ್ಯವನ್ನು ಬೆಳೆಸಬೇಕು ಮತ್ತು ಇಂದಿನ ಸಮಾಜ ಶಿಕ್ಷಕರಿಂದ ಅನೇಕ ನಿರೀಕ್ಷೆಗಳನ್ನು ಮಾಡುತ್ತವೆ. ಆ ನಿರೀಕ್ಷೆಗಳನ್ನು ಪೂರೈಸಬೇಕು ಎಂದು ಹೇಳಿದರು. ಶಿಕ್ಷಕರ ದಿನಾಚರಣೆ ನಿಮಿತ್ತ ಕಾಲೇಜಿನಲ್ಲಿ ಆದರ್ಶ್ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಥಮ ಬಹುಮಾನವನ್ನು ಶಿಕ್ಷಕ ವಿದ್ಯಾರ್ಥಿಯಾದ ಕುಮಾರ. ಮಹೇಶ ಎಸ್. ಕಲ್ಯಾಣಕರ, ದ್ವಿತೀಯ ಬಹುಮಾನವನ್ನು ಕುಮಾರಿ. ತೇಜಾ ಎಮ್. ನಾಯ್ಕ ಮತ್ತು ಕುಮಾರಿ. ದೀಪಲಕ್ಷ್ಮಿ ಲಕ್ಷ್ಮೇಶ್ವರ, ತೃತೀಯ ಬಹುಮಾನವನ್ನು ಕುಮಾರಿ. ವಿ. ಅನ್ವಿತಾ, ಸಮಾಧಾನಕರ ಬಹುಮಾನವನ್ನು ಕುಮಾರಿ. ಸುಮಾ ಎ. ನಾಯ್ಕ ಇವರು ಪಡೆದಿರುತ್ತಾರೆ.
ಕಾರ್ಯಕ್ರಮದಲ್ಲಿ ಕುಮಾರಿ. ನಾಗಶ್ರೀ ವಿ. ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿಸಂಘದ ಕಾರ್ಯಧ್ಯಕ್ಷರಾದ ಜಿ. ಡಿ. ಭಟ್ ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ಉಪನ್ಯಾಸಕರಾದ ಸುಬ್ರಹ್ಮಣ್ಯ ಕೆ. ಭಟ್ ಸಭೆಗೆ ಪರಿಚಯಿಸಿದರು. ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಕರ ಯಾದಿಯನ್ನು ಉಮೇಶ ನಾಯ್ಕ ಎಸ್. ಜೆ. ವಾಚಿಸಿದರು. ತೇಜಾ ಎಮ್. ನಾಯ್ಕ ವಂದಿಸಿದರು ಮತ್ತು ಕುಮಾರಿ. ವಿ. ಅನ್ವಿತಾ ಕಾರ್ಯಕ್ರಮ ನಿರ್ವಹಿಸಿದರು.