Slide
Slide
Slide
previous arrow
next arrow

ರಾಮನಗುಳಿಯ ದೋಣಿ ನಾರಾಯಣ ಇನ್ನು ನೆನಪು‌ ಮಾತ್ರ

300x250 AD

ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ಕಳೆದ ಸುಮಾರು 30 ವರ್ಷಗಳಿಂದ ಗಂಗಾವಳಿ ನದಿಗೆ ದೋಣಿ ನಾವಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮನಗುಳಿಯ ನಾರಾಯಣ ಹರಿಕಂತ್ರ (74) ಭಾನುವಾರ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ.

ನಾರಾಯಣ ಹರಿಕಂತ್ರ ರಾಮನಗುಳಿಯಲ್ಲಿ ತೂಗುಸೇತುವೆ ನಿರ್ಮಾಣಕ್ಕೂ ಮೊದಲು ರಾಮನಗುಳಿ ಹಾಗೂ ಕಲ್ಲೇಶ್ವರ ಗ್ರಾಮಗಳಿಗೆ ಸಂಪರ್ಕಿಸಲು 3 ದಶಕಗಳಿಗೂ ಹೆಚ್ಚಿನ ಕಾಲ ಗಂಗಾವಳಿ ನದಿಯಲ್ಲಿ ದೋಣಿ ನಾವಿಕನಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದರು. ನಿರಂತರವಾಗಿ ದೋಣಿಯ ನಾವಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಇವರು ದೋಣಿ ನಾರಾಯಣ ಅಂತಲೇ ಖ್ಯಾತಿ ಗಳಿಸಿದ್ದರು. ಮೊದಲೆಲ್ಲ ಮೊಬೈಲ್ ಬಳಕೆ ಬರುವ ಪೂರ್ವದಲ್ಲಿ ಆಚೆ ದಡದಲ್ಲಿರುವ (ಕಲ್ಲೇಶ್ವರ) ದೋಣಿಯನ್ನು ಈಚೆ ದಡಕ್ಕೆ (ರಾಮನಗುಳಿ) ಕರೆಯಲು ದೊಡ್ಡದಾಗಿ “ಕೂ” ಎನ್ನುವ ಮೂಲಕ ಕರೆಯಲಾಗುತ್ತಿತ್ತು. ಹೀಗೆ ಎಷ್ಟೇ ತಡರಾತ್ರಿ “ಕೂ” ಹಾಕಿದರೂ ದೋಣಿ ನಾರಾಯಣ ಅವರು ತಕ್ಷಣ ಎದ್ದು ಜನರನ್ನು ಇತ್ತಿಂದತ್ತ ದಾಟಿಸುವ ಕೆಲಸ ಮಾಡುತ್ತಿದ್ದರು.

ಜನರೊಂದಿಗೆ ತಕ್ಷಣ ಬೆರೆಯುವ ಗುಣ ಹೊಂದಿದ್ದ ಇವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಧೈರ್ಯ, ಸಾಹಸ ಪ್ರವೃತ್ತಿಯನ್ನು ಹೊಂದಿದ್ದ ಇವರು ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಹೊಂದಿದ್ದರು. 2019 ರಲ್ಲಿ ತೂಗುಸೇತುವೆ ಕುಸಿತಗೊಂಡ ಸಂದರ್ಭದಲ್ಲಿ ಶಾಶ್ವತ ಸೇತುವೆ ನಿರ್ಮಾಣಗೊಳ್ಳುವ ತನಕ ಮತ್ತೆ ದೋಣಿ ಸಂಪರ್ಕ ವ್ಯವಸ್ಥೆ ಪ್ರಾರಂಭಗೊಂಡಾಗ ಕೆಲ ಸಮಯ ಅವರು ದೋಣಿ ಚಲಾಯಿಸಿದ್ದರು. ತಮ್ಮ ಅನಾರೋಗ್ಯದ ಕಾರಣ ಬಳಿಕ ತನ್ನ ಮಕ್ಕಳಾದ ಶಾಂತಾ, ಗಣಪತಿ ಅವರಿಗೆ ದೋಣಿಯನ್ನು ಚಲಾಯಿಸುವಂತೆ ಸೂಚಿಸಿದ್ದರು.

300x250 AD

ತಮ್ಮ ವ್ಯಕ್ತಿತ್ವ, ಹಾಸ್ಯಮಯ ಮಾತು, ಪ್ರಾಮಾಣಿಕತೆಯ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರ ಅಪಾರ ಪ್ರೀತಿ, ವಿಶ್ವಾಸ ಗಳಿಸಿದ್ದ ದೋಣಿ ನಾರಾಯಣ ಅವರ ನಿಧನದ ಸುದ್ದಿಗೆ ಇಡೀ ಸುತ್ತಮುತ್ತಲಿನ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ‌.

Share This
300x250 AD
300x250 AD
300x250 AD
Back to top