ಶಿರಸಿ: ನಗರದ ಆದರ್ಶ ವನಿತಾ ಸಮಾಜದ 49ನೇ ವಾರ್ಷಿಕೋತ್ಸವ ಬುಧವಾರ ಬಹಳ ವಿಭಿನ್ನವಾಗಿ ನಡೆಯಿತು. ವೈವಿಧ್ಯ ಕಾರ್ಯಕ್ರಮಗಳ ಮೂಲಕ ಸಮಾಜದ ವನಿತೆಯರು ಸಂಭ್ರಮಿಸಿದರು.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಬೆಳಗ್ಗೆ ಅರಿಶಿನ ಕುಂಕುಮ, ಲಲಿತಾ ಸಹಸ್ರನಾಮ ಹಾಗೂ ಸ್ತೋತ್ರಗಳನ್ನು ಪಠಿಸಿದರು. ಪ್ರತಿವರ್ಷದಂತೆ ಉಡಿತುಂಬಿ ಭಜನೆ ಮಾಡಲಾಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಆದರ್ಶ ವನಿತಾ ಸಮಾಜದ ಸಂಸ್ಥಾಪಕ ಹಿರಿಯ ಸದಸ್ಯೆ ಶಾಂತಾ ನರಸಿಂಹಮೂರ್ತಿ ಹಾಗೂ
ರಂಗೋಲಿಯಲ್ಲಿ ಕಲಾ ಕೌಶಲ್ಯ ಹೊಂದಿರುವ ಕಲಾವಿದೆ ಚಿನ್ಮಯಿ ಹೆಗಡೆ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಸಂಸ್ಥಾಪಕ ಅಧ್ಯಕ್ಷೆ ವಾಸಂತಿ ಹೆಗಡೆ, ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಉಪಸ್ಥಿತರಿದ್ದರು. ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಮಂಗಲಾ ಹಬ್ಬು ಅಧ್ಯಕ್ಷತೆ ವಹಿಸಿದ್ದರು. ವನಜಾ ಬೆಳಗಾಂವಕರ್ ಪ್ರಾರ್ಥಿಸಿದರು. ಖಜಾಂಚಿ ಜ್ಯೋತಿ ಹೆಗಡೆ ವರದಿ ವಾಚಿಸಿದರು. ಉಪಾಧ್ಯಕ್ಷೆ ರೇಖಾ ಭಟ್ ನಿರೂಪಿಸಿದರು.
ಸಾಂಸ್ಕೃತಿಕ ವೈವಿಧ್ಯ:
ನಂತರ ಸಮಾಜದ ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನಸೂರೆಗೊಂಡರು. ಭಾವಗೀತೆ, ಭಕ್ತಿಗೀತೆ, ನೃತ್ಯಗಳು, ಹಾಸ್ಯ ಪ್ರಹಸನ, ಹಾರ್ಮೋನಿಯಂ ವಾದನ, ಪ್ಯಾಷನ್ ಶೋ ಮುಂತಾದ ಕಾರ್ಯಕ್ರಮಗಳು ವಾರ್ಷಿಕೋತ್ಸವಕ್ಕೆ ಮೆರಗು ಹೆಚ್ಚಿಸಿದವು. ಸಾಂಸ್ಕೃತಿಕ ಕಾರ್ಯಕ್ರಮ ಅಹಲ್ಯಾ ಹೆಗಡೆ ಮತ್ತು ಉಷಾ ಭಟ್ ನಿರ್ವಹಿಸಿದರು. ಸಹನಾ ಜೋಶಿ ವಂದಿಸಿದರು.