Slide
Slide
Slide
previous arrow
next arrow

ದಾಂಡೇಲಿಯ ಗೌರೀಶ ನಾಯ್ಕ್‌ಗೆ ಜ್ಯೋತಿಷ್ಯ ಸಾಧಕ ಬಿರುದು ಪ್ರದಾನ

300x250 AD

ದಾಂಡೇಲಿ : ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ನಾಯಕರ ಪ್ರವರ್ತನೆಯ ಭಾರತಿ ಪ್ರಕಾಶನದ ಆಶ್ರಯದಡಿ ಸ್ವಾತಂತ್ರ್ಯ ಯೋಧ ನಾಡುಮಾಸ್ಕೇರಿಯ ಕೃಷ್ಣ ವೆಂಕಣ್ಣ ನಾಯಕ ಅವರ 110ನೇ ಜನ್ಮೋತ್ಸವದ ನಿಮಿತ್ತವಾಗಿ
ನಗರದ ಆಧ್ಯಾತ್ಮಿಕ ಚಿಂತಕರಾದ ಗೌರೀಶ್ ನಾಯ್ಕ ಅವರಿಗೆ ಜ್ಯೋತಿಷ್ಯ ಸಾಧಕ ಗೌರವ ಪ್ರದಾನ ಮತ್ತು ನಗರ ಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಷ್ಪಾಕ್ ಶೇಖ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಮಾಸ್ಕೇರಿ ಸಾಹಿತ್ಯ ಭವನದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಳಿಯಾಳದ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರರಾದ ಮೇಘರಾಜ ಮೇತ್ರಿ ಅವರು ಮಾಸ್ಕೇರಿ ನಾಯಕರವರದ್ದು ಅಪ್ಪಟ ಪ್ರಾಂಜಲ ಗುಣ ಮನಸ್ಸಿನ ನಾಡು ನುಡಿ ಸೇವೆಯಾಗಿದೆ. ಸಾಹಿತಿಕವಾಗಿ ಸಾಂಸ್ಕೃತಿಕವಾಗಿ ಸುಧೀರ್ಘ ವರ್ಷಗಳಿಂದ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಾಸ್ಕೇರಿ ನಾಯಕರವರು ಪ್ರತಿಭೆಗಳನ್ನು ಹಾಗೂ ಬಹುಮುಖ ವ್ಯಕ್ತಿತ್ವಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಮೂಲಕ ಆದರ್ಶ ಪರಂಪರೆಯನ್ನು ಹುಟ್ಟು ಹಾಕಿ ಮುನ್ನಡೆಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಜ್ಯೋತಿಷ್ಯ ಸಾಧಕ ಬಿರುದನ್ನು ಸ್ವೀಕರಿಸಿ ಮಾತನಾಡಿದ ಗೌರೀಶ್ ನಾಯ್ಕ ಅವರು ಈ ಗೌರವ ಬಯಸದೇ ಬಂದಾಗ ಗೌರವವಾಗಿದೆ. ಮಾತೃ ವಾತ್ಸಲ್ಯದಿಂದ ನೀಡಿದ ಬಿರುದು ನನಗೆ ಹೊಸ ಚೈತನ್ಯ ಶಕ್ತಿಯನ್ನು ತಂದುಕೊಟ್ಟಿದೆ. ಉನ್ನತ ಕೆಲಸ ಕಾರ್ಯಗಳ ಮೂಲಕ ಸಮಾಜಕ್ಕೆ ಶಕ್ತಿಯನ್ನು ತುಂಬುವ ಮಾಸ್ಕೇರಿ ನಾಯಕರವರು ನನ್ನಂತವನನ್ನು ಗುರುತಿಸಿ ಬಿರುದು ನೀಡಿ ಸನ್ಮಾನಿಸಿರುವುದು ನನ್ನ ಜೀವನದ ಪರಮೋಚ್ಚ ಸ್ಮರಣೀಯ ದಿನವಾಗಿದೆ. ಈ ಗೌರವ ಮುಂದೆ ಮತ್ತಷ್ಟು ಸಾಧಿಸು ಎನ್ನುವ ಪ್ರೇರೇಪಿಸುವ ಮಹತ್ವದ ಸಂಕಲ್ಪದ ಸನ್ಮಾನವಾಗಿದೆ ಎಂದರು. ಹುಟ್ಟು ಸಾವಿನ ನಡುವೆ ಇರುವ ಈ ಬದುಕನ್ನು ಸಾರ್ಥಕತೆಯ ಕಡೆಗೆ ಕೊಂಡೊಯ್ಯಲು ಮಾಸ್ಕೇರಿ ನಾಯಕರ ಇಂತಹ ಕಾರ್ಯಕ್ರಮಗಳು ಸದಾ ಪ್ರೇರಣಾದಾಯಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸುಭಾಷ್ ನಾಯಕ, ಹಾಸ್ಯ ಕಲಾವಿದ ವಿಶ್ವನಾಥ ಭಾಗವತ್ ಅವರು ಮಾಸ್ಕೇರಿ ನಾಯಕರ ಬದ್ಧತೆಯ ಸೇವಾ ಕೈಂಕರ್ಯಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರು ಮಾಸ್ಕೇರಿ ನಾಯಕರ ಸ್ವಚ್ಚ ಮನಸ್ಸಿನ ಈ ಸನ್ಮಾನ ನನಗೆ ನನ್ನ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಸ್ಪೂರ್ತಿಯಾಗಿದೆ. ನಗರದ ಅಭಿವೃದ್ಧಿಗಾಗಿ ವಿಶೇಷ ಮುತುವರ್ಜಿಯಿಂದ ಕೆಲಸ ಮಾಡುವುದಾಗಿ ಹೇಳಿದ ಅವರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

300x250 AD

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರರಾದ ರಮೇಶ್ ನಾಯ್ಕ್, ರವಿ ಚವ್ಹಾಣ, ಪ್ರೇಮಾನಂದ ರಾಥೋಡ್, ರಮೇಶ್ ಚಂದಾವರ ಅವರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ‌ ಮಾಸ್ಕೇರಿ ನಾಯಕರು ಜೀವನದಲ್ಲಿ ಸಾಧನೆ ಮಾಡುವುದು ಎಷ್ಟು ಮುಖ್ಯವೋ, ನಿಜವಾದ ಸಾಧಕರನ್ನು ಗುರುತಿಸುವುದು ಅಷ್ಟೇ ಮುಖ್ಯವಾದ ಕಾರ್ಯವಾಗಿದೆ. ನಿಸ್ವಾರ್ಥ ಮನಸ್ಸಿನಿಂದ ಮಾಡಿದ ಕಾರ್ಯ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿ. ಈ ನಿಟ್ಟಿನಲ್ಲಿ ಗೌರೀಶ್ ನಾಯ್ಕ ಅವರು ಒಬ್ಬ ವಿಚಾರವಾದಿಯಾಗಿ, ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಉತ್ತಮ ಹೆಸರನ್ನು ಪಡೆದುಕೊಂಡವರು. ಅವರ ಸದ್ದಿಲ್ಲದ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಅತೀವ ಆನಂದವೆನಿಸುತ್ತದೆ ಎಂದರು. ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರು ಸರ್ವ ಸಮಾನತೆಯ ಪ್ರತಿಪಾದಕ. ನಗರದ ಅಭಿವೃದ್ಧಿಯ ಬಗ್ಗೆ ತನ್ನದೇ ಆದ ಕನಸನಿಟ್ಟುಕೊಂಡು ಆ ಕನಸು ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಶ್ರಮವನ್ನು ವಹಿಸುವವರು. ಅವರ ರಾಜಕೀಯ ಸೇವೆಯನ್ನು ಪರಿಗಣಿಸಿ ಮತ್ತು ಅನುಭವ ಹಾಗೂ ಅರ್ಹತೆಗೆ ಅನುಗುಣವಾಗಿ ನಗರ ಸಭೆಯ ಅಧ್ಯಕ್ಷ ಪದವಿ ಅವರನ್ನು ಅರಸಿ ಬಂದಿದೆ ಎಂದರು.

ಕಾವ್ಯ ಭಟ್ ಮತ್ತು ಆಧ್ಯ ನಾಯಕ್ ಪ್ರಾರ್ಥನೆ ಗೀತೆ ಹಾಡಿದರು. ಮಾಸ್ಕೇರಿ ನಾಯಕ ಸ್ವಾಗತಿಸಿದರು. ವಿಶ್ವನಾಥ್ ಭಾಗವತ್ ವಂದಿಸಿದರು. ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ನಂದಿನಿ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತಿ ಕವರಿ ಸಹಕರಿಸಿದರು.

Share This
300x250 AD
300x250 AD
300x250 AD
Back to top