ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಡಾ.ವೀರೇಂದ್ರ ಹೆಗ್ಗಡೆ ಕೈಗೊಂಡ ಕಾರ್ಯ ಸದಾ ಸ್ಮರಣೀಯ
ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್ ( ರಿ ) ಸಿದ್ದಾಪುರ ತಾಲೂಕು ವತಿಯಿಂದ 2024-25ನೇ ಸಾಲಿನಲ್ಲಿ ಸುಜ್ಞಾನನಿಧಿ ಶಿಷ್ಯ ವೇತನ ಕಾರ್ಯಕ್ರಮದ ಅಡಿಯಲ್ಲಿ ಪ್ರಸ್ತುತ ವರ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರಾತಿ ಮಾಡಿರುವ ತಾಲೂಕಿನ 78 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಸ ಪಟ್ಟಣದ ಶ್ರೀ ಗಂಗಾಂಬಿಕಾ ದೇವಸ್ಥಾನ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಎ.ಬಾಬು ನಾಯ್ಕ್ ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಡಾ.ಡಿ. ವೀರೇಂದ್ರ ಹೆಗ್ಗಡೆ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳಾದ ಸದಸ್ಯರಿಗೆ ಸುಲಭ ರೀತಿಯಲ್ಲಿ ಬ್ಯಾಂಕ್ ಸಾಲದ ಸೌಲಭ್ಯ, ದೇವಸ್ಥಾನ ರಚನೆಗೆ ಸಹಾಯಧನ, ನಿರ್ಗತಕರಿಗೆ ಮಾಸಾಶನ, ಅನಾರೋಗ್ಯ ಪೀಡಿತರಿಗೆ ವೀಲ್ ಚೇರ್, ವಾಕಿಂಗ್ ಸ್ಟ್ರಿಕ್ , ವಾಟರ್ ಬೆಡ್, ಕೆರೆ ಹೂಳೆತ್ತುವುದು, ಶಾಲಾ ಶೌಚಾಲಯ ರಚನೆ, ಶಾಲಾ ಕಾಂಪೌಂಡ್ ರಚನೆ, ಜ್ಞಾನದೀಪ ಟೀಚರ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸುಜ್ಞಾನನಿಧಿ ಶಿಷ್ಯವೇತನ ವಿತರಣೆ ಹೀಗೆ ಪೂಜ್ಯರು ಹಮ್ಮಿಕೊಂಡ ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು. ಶಿಕ್ಷಣ ಅನ್ನುವಂತದ್ದು ಪ್ರತಿ ಮಕ್ಕಳಿಗೂ ಸಹ ತೀರ ಅವಶ್ಯಕ ಹಾಗಾಗಿ ಎಲ್ಲರೂ ಉತ್ತಮ ಶಿಕ್ಷಣವನ್ನು ಪಡೆಯಬೇಕೆನ್ನುವ ದೃಷ್ಟಿಯಿಂದ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತನ್ನ ಕೊಟ್ಟು ಪೂಜ್ಯ ಹೆಗಡೆಯವರು ಪ್ರಸ್ತುತ ವರ್ಷದಲ್ಲಿ ಸಿದ್ದಾಪುರ ತಾಲೂಕಿನ 78 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಮಾಡಿದ್ದು, ರಾಜ್ಯದಲ್ಲಿ 97 ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ 114 ಕೋಟಿ ರೂಪಾಯಿ ಶಿಷ್ಯ ವೇತನ ಮಂಜೂರಾತಿ ಮಾಡಿರುತ್ತಾರೆ . ಪೂಜ್ಯರು ನೀಡಿರುವ ಪ್ರಸಾದ ರೂಪದ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಪಡೆದುಕೊಂಡು ತಾವೆಲ್ಲ ಉತ್ತಮ ಶಿಕ್ಷಣವನ್ನು ಪಡೆದು ಮುಂದಕ್ಕೆ ತಮ್ಮಿಂದ ಅನೇಕ ಮಕ್ಕಳಿಗೆ ಸಹಾಯ ಮಾಡುವ ದೃಷ್ಟಿಯಲ್ಲಿ ತಾವೆಲ್ಲ ಕಾರ್ಯ ಪ್ರವರ್ತವಾಗಬೇಕು ಎಂದು ತಿಳಿಸಿದರು.
ಸಿದ್ದಾಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಂ.ಎಚ್.ನಾಯಕ ಮಾತನಾಡಿ ಪೂಜ್ಯರು ಅನೇಕ ಜನಪರ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಸರ್ಕಾರ ಮಾಡದ ಕೆಲಸ ಕಾರ್ಯಗಳನ್ನು ಪೂಜ್ಯರು ಮಾಡುತ್ತಿದ್ದಾರೆ. ಪೂಜ್ಯರು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ತಾಲೂಕಿನ 78 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ನೀಡಿರುವುದು ನಮ್ಮೆಲ್ಲರ ಸೌಭಾಗ್ಯ. ಈ ಮೊತ್ತವನ್ನು ಶಿಕ್ಷಣಕ್ಕೆ ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣವನ್ನು ಪಡೆದು ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ನಿಮ್ಮ ಹೆಸರನ್ನು ಯೋಜನೆಯ ಹೆಸರನ್ನು ಉಳಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ತಮ್ಮಿಂದ ಅನೇಕರಿಗೆ ಸಹಕಾರ ನೀಡುವಂತೆ ಕಥೆಯನ್ನು ಹೇಳುವುದರ ಮೂಲಕ ಮಾಹಿತಿಯನ್ನು ನೀಡಿದರು.
ಸಿದ್ದಾಪುರ ತಾಲೂಕು ವೈದ್ಯಾಧಿಕಾರಿಯಾದ ಲಕ್ಷ್ಮಿಕಾಂತ್ ಮಾತನಾಡಿ ಧರ್ಮಸ್ಥಳ ಸಂಸ್ಥೆಯವರು ನಡೆಸುತ್ತಿರುವ ಸಿದ್ಧವನ ನರ್ಸರಿಯಲ್ಲಿ ನಾನು ಉತ್ತಮ ಶಿಕ್ಷಣವನ್ನ ಪಡೆದು ಇವತ್ತು ಕ್ಷೇತ್ರದ ಹಾಗೂ ಪೂಜ್ಯರ ಆಶೀರ್ವಾದದಿಂದ ನಾನೊಂದು ಉನ್ನತ ಹುದ್ದೆಯಲ್ಲಿ ಇರುವುದು ನನ್ನ ಸೌಭಾಗ್ಯ. ತಮಗೂ ಸಹ ಪೂಜ್ಯರ ಆಶೀರ್ವಾದದಿಂದ ಶಿಷ್ಯವೇತನ ಮಂಜೂರಾತಿ ಆಗಿದ್ದು ಇದರಿಂದ ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಪ್ರಜೆಗಳಾಗಿ ಬದುಕಬೇಕೆಂದು ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಸುಭಾಷ್ ನಾಯ್ಕ ಮಾತನಾಡಿ ಶ್ರೀ ಧರ್ಮಸ್ಥಳ ಸಂಸ್ಥೆ ಕೇವಲ ಶಿಷ್ಯ ವೇತನ ಕೊಡುವುದಷ್ಟೇ ಅಲ್ಲದೆ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ನೀಡುವಂತದ್ದು , ಮಧ್ಯ ವರ್ಜನ ಶಿಬಿರದ ಮೂಲಕ ಪಾನಮುಕ್ತ ಬದುಕಿಗೆ ದಾರಿ ಮಾಡಿ ಕೊಡುವಂತದ್ದು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಮಕ್ಕಳು /ವಿದ್ಯಾರ್ಥಿಗಳು ಮಾದಕ ವ್ಯಸನಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು, ಹೀಗೆ ಅನೇಕ ಸರ್ಕಾರ ಮಾಡದ ಜನಪರ ಕಾರ್ಯಕ್ರಮವನ್ನು ಮಾಡುತ್ತಿದೆ. ಇವತ್ತು 78 ವಿದ್ಯಾರ್ಥಿಗಳಿಗೆ ಪೂಜ್ಯರು ಮಂಜೂರು ಮಾಡಿದ ಶಿಷ್ಯ ವೇತನದಿಂದ ಉತ್ತಮ ಶಿಕ್ಷಣವನ್ನು ಪಡೆಯಿರಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ 78 ವಿದ್ಯಾರ್ಥಿಗಳಿಗೆ ಡಾ.ಡಿ. ವೀರೇಂದ್ರ ಹೆಗಡೆಯವರು ಮಂಜುರಾತಿ ಮಾಡಿರುವ ಸುಜ್ಞಾನ ನಿಧಿ ಶಿಷ್ಯವೇತನ ಮಂಜುರಾತಿ ಪತ್ರವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ 78 ವಿದ್ಯಾರ್ಥಿಗಳು, ಪಾಲಕರು, ಮೇಲ್ವಿಚಾರಕರು, ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು, ಕೃಷಿ ಮೇಲ್ವಿಚಾರಕರು,, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ಪ್ರದೀಪ್ ನಿರೂಪಿಸಿದರು. ತಾಲೂಕು ಯೋಜನಾಧಿಕಾರಿಯಾದ ಗಿರೀಶ್ ಜಿ.ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿದರು..