ಕಾರವಾರ: ಭಾರತ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆ.15 ರವರೆಗೆ ನಡೆಯುವ “ಹರ್ ಘರ್ ತಿರಂಗಾ” ಅಭಿಯಾನದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ದೇಶಪ್ರೇಮವನ್ನು ಅಭಿವ್ಯಕ್ತಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದರು.
ಅವರು ಸೋಮವಾರ ವೀಡಿಯೋ ಸಂವಾದ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಆಗಸ್ಟ್ 13 ರಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೈಕ್, ಸೈಕಲ್ ಜಾಥಾ ಮೂಲಕ ತಿರಂಗ ರ‍್ಯಾಲಿ ಆಯೋಜಿಸಬೇಕು, ಆಗಸ್ಟ್ 14 ರಂದು ವಾಕಥಾನ್ ಮೂಲಕ ತಿರಂಗ ರ‍್ಯಾಲಿ ಮತ್ತು ರಂಗೋಲಿ ಚಿತ್ರದ ಮೂಲಕ ಅಭಿಯಾನ ಕೈಗೊಳ್ಳಬೇಕು. ಆಗಸ್ಟ್ 15 ರಂದು ಪ್ರತಿ ಮನೆ ಮನೆಯಲ್ಲೂ ಧ್ವಜಾರೋಹಣ ಕೈಗೊಂಡು, ತಿರಂಗ ಜೊತೆಗಿನ ಸೆಲ್ಫಿಯನ್ನು http://harghartiranga.com ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಅವರು, ಸ್ಥಳೀಯವಾಗಿ ಆಯೋಜಿಸಲಾಗುವ ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಸ್ವಾತಂತ್ರ‍್ಯದ ಸಂಭ್ರಮವನ್ನು ಪ್ರತಿ ಮನೆ-ಮನೆಯಲ್ಲೂ ಹಾಗೂ ಸರ್ಕಾರಿ/ಅರೆ ಸರ್ಕಾರಿ/ನಿಗಮ-ಮಂಡಳಿಗಳು/ಸ್ವ-ಸಹಾಯ ಗುಂಪುಗಳು/ಸಾರ್ವಜನಿಕ ಉದ್ಯಮ ಸಂಸ್ಥೆಗಳು/ ಸಂಘ-ಸAಸ್ಥೆಗಳು/ ನಾಗರಿಕ ಸೇವಾ ಸಂಸ್ಥೆಗಳು/ ಶಾಲಾ ಕಾಲೇಜು ವಿದ್ಯಾರ್ಥಿಗಳು/ ಸಾರ್ವಜನಿಕರು/ ಇತರೆ ಎಲ್ಲ ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು ಸೇರಿ ಸ್ವತ ತಾವೇ ಸ್ವಯಂ ಕ್ರಿಯಾಶೀಲರಾಗಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ಹರ್-ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.